HEALTH TIPS

ಕೇರಳದಲ್ಲಿ ವಿದ್ಯಾರ್ಥಿಗಳಲ್ಲಿ ರಕ್ತದೊತ್ತಡ ಹೆಚ್ಚಳ : ತಪಾಸಣೆಗೆ ತೀರ್ಮಾನ

 

                 ತಿರುವನಂತಪುರಂ:  ಕೇರಳದಲ್ಲಿ ಇತ್ತೀಚೆಗೆ ರಕ್ತದೊತ್ತಡ (ಬಿಪಿ)ವುಳ್ಳ ಜನರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದಾಗಿ ಸಮೀಕ್ಷಾ ವರದಿಯೊಂದು ಸೂಚಿಸುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಬಿ.ಪಿ. ತಪಾಸಣೆ ನಡೆಸಲು ಸರ್ಕಾರ ಮುಂದಾಗಿದೆ. ಇದರಂತೆ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಗಳಲ್ಲಿ ಪ್ಲಸ್ ವನ್‍ನಲ್ಲಿ ಕಲಿಯುತ್ತಿರುವ 1.75 ಲಕ್ಷ  ವಿದ್ಯಾರ್ಥಿಗಳ ಬಿ.ಪಿ.ತಪಾಸಣೆ ನಡೆಸಲಾಗುವುದು. 

                ರಾಜ್ಯದಲ್ಲಿ ಒಟ್ಟು 820 ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಗಳಿವೆ. `ಸಶೃದ್ಧಂ' ಎಂಬ ಯೋಜನೆಯಡಿ ಈ ಶಾಲೆಗಳ ವಿದ್ಯಾರ್ಥಿಗಳ ಬಿ.ಪಿ.ತಪಾಸಣೆ ನಡೆಸಲಾಗುವುದು. ರಾಜ್ಯದಲ್ಲಿ ವಿದ್ಯಾರ್ಥಿಗಳಲ್ಲೂ ಇತ್ತೀಚೆಗೆ ರಕ್ತದೊತ್ತಡ ಕಾಣಿಸಿಕೊಳ್ಳತೊಡಗಿದೆ ಎಂದು ಆರೋಗ್ಯ ಇಲಾಖೆಯ ವರದಿಗಳು ಸೂಚಿಸುತ್ತಿದೆ. ಅದುವೇ ವಿದ್ಯಾರ್ಥಿಗಳ ಬಿ.ಪಿ. ತಪಾಸಣೆ ನಡೆಸಲು ಸರ್ಕಾರ ಮುಂದಾಗಲು ಪ್ರಮುಖ ಕಾರಣವಾಗಿದೆ. 

              ಇದರ ಪ್ರಥಮ ಹಂತವಾಗಿ ಪ್ಲಸ್ ವನ್ ವಿದ್ಯಾರ್ಥಿಗಳ ಬಿ.ಪಿ. ತಪಾಸಣೆ ನಡೆಸುವ ತೀರ್ಮಾನ ಕೈಗೊಳ್ಳಲಾಗಿದೆ. ಹೀಗೆ ಬಿ.ಪಿ. ಪತ್ತೆಯಾದ ವಿದ್ಯಾರ್ಥಿಗಳಿಗೆ ಆರಂಭಿಕ ಹಂತದಲ್ಲೇ ಚಿಕಿತ್ಸೆ ನೀಡಿ ಅದರ ಜೊತೆಗೆ ಅವರನ್ನು ಜೀವನ ಶೈಲಿ ರೋಗದಿಂದಲೂ ಮುಕ್ತಗೊಳಿಸುವ ಉದ್ದೇಶದಿಂದ ಇಂತಹ ತೀರ್ಮಾನ ಕೈಗೊಳ್ಳಲಾಗಿದೆ. ಮಹಿಳಾ - ಶಿಶು ಕಲ್ಯಾಣ ಇಲಾಖೆ ಮತ್ತು ತಿರುವನಂತಪುರ ಸರ್ಕಾರಿ ವೈದ್ಯಕೀಯ ಕಾಲೇಜನ್ನು ಕೇಂದ್ರವನ್ನಾಗಿಸಿ ಕಾರ್ಯವೆಸಗುತ್ತಿರುವ ಚೈಲ್ಡ್ ಡೆವಲಪ್‍ಮೆಂಟ್ ಸೆಂಟರ್ (ಸಿಜಿಸಿ) ಸಹಕಾರದೊಂದಿಗೆ ಈ ಯೋಜನೆ ಜಾರಿಗೊಳಿಸಲಾಗುವುದು. ಸಹೃದಯ ಕ್ಲಬ್‍ಗೆ ಇದರ ಸಂಯೋಜಕ ಹೊಣೆಗಾರಿಕೆ ವಹಿಸಿಕೊಡಲಾಗಿದೆ. ಬಿ.ಪಿ. ತಪಾಸಣೆ ನಡೆಸಲು ಅಗತ್ಯದ ವೈದ್ಯಕೀಯ ಉಪಕರಣಗಳನ್ನೂ ಶಾಲೆಗಳಿಗೆ ಪೂರೈಸಲಾಗುವುದು. 


                 ಸಶೃದ್ಧಂ ಯೋಜನೆ : ರಾಜ್ಯದಲ್ಲಿ ವಿದ್ಯಾರ್ಥಿಗಳ ರಕ್ತದೊತ್ತಡ (ಬಿ.ಪಿ), ಅಮಿತ ದೇಹಭಾರ, ಎತ್ತರ ಇತ್ಯಾದಿ ಮಾಹಿತಿಗಳನ್ನು ಸಂಗ್ರಹಿಸಲು ಆರೋಗ್ಯ ಇಲಾಖೆ `ಸಶೃದ್ಧಂ' ಎಂಬ ಹೆಸರಿನ ಯೋಜನೆಯೊಂದಿಗೆ ಸಮೀಕ್ಷೆ ನಡೆಸಲಿದೆ. ಇದರಂತೆ 20 ನಿಮಿಷಗಳ ಅಂತರದಲ್ಲಿ ಎರಡು ಬಾರಿ ವಿದ್ಯಾರ್ಥಿಗಳ ಬಿ.ಪಿ. ತಪಾಸಣೆ ನಡೆಸಲಾಗುವುದು. ನಂತರ ವಿದ್ಯಾರ್ಥಿಗಳನ್ನು ಆನ್‍ಲೈನ್ ಸರ್ವೆಯಲ್ಲೂ ಪಾಲ್ಗೊಳ್ಳುವಂತೆ ಮಾಡಲಾಗುವುದು. ಆಹಾರ ಸೇವನೆ ರೀತಿ, ದೈಹಿಕ ಶ್ರಮ, ಮಾನಸಿಕ ಒತ್ತಡ ಇತ್ಯಾದಿಗಳ ಬಗ್ಗೆ ಹಾಗು ವಿದ್ಯಾರ್ಥಿಗಳಲ್ಲಿ ಯಾರಾದರೂ ಮಾದಕ ವಸ್ತು ಸೇವಿಸುವವರಿದ್ದಾರೆಯೇ ಎಂಬ ಬಗ್ಗೆಯೂ ಆನ್‍ಲೈನ್‍ನಲ್ಲಿ ಸರ್ವೆ ನಡೆಸಿ ಅದನ್ನು ದಾಖಲಿಸಲಾಗುವುದು. ಹೆತ್ತವರ ಅನುಮತಿ ಪಡೆದುಕೊಂಡೇ ವಿದ್ಯಾರ್ಥಿಗಳನ್ನು ಸರ್ವೆಯಲ್ಲಿ ಸೇರ್ಪಡೆಗೊಳಿಸಲಾಗುವುದು. ಅತೀ ಹೆಚ್ಚು ಬಿ.ಪಿ. ಇರುವವರನ್ನು ಎನ್‍ಎಚ್‍ಎಂ ನರ್ಸ್‍ಗಳಿಂದ ಪುನ: ಬಿ.ಪಿ. ತಪಾಸಣೆಗೊಳಪಡಿಸಲಾಗುವುದು. ಅಗತ್ಯವೆನಿಸಿದ್ದಲ್ಲಿ ಅಂತಹವರಿಗೆ ಚಿಕಿತ್ಸಾ ಸೌಕರ್ಯವನ್ನು ಏರ್ಪಡಿಸಲಾಗುವುದು. 

              ಶಾಲಾ ಶಿಬಿರಗಳಲ್ಲಿ ಭಾಗವಹಿಸುವ ಮಕ್ಕಳಲ್ಲಿ ಬಿ.ಪಿ. ಹೆಚ್ಚಳ : ಶಾಲಾ ಶಿಬಿರಗಳಲ್ಲಿ ಭಾಗವಹಿಸುವ ಮಕ್ಕಳ ಪೈಕಿ ಶೇ.10 ರಷ್ಟು ಮಂದಿಯಲ್ಲಿ ರಕ್ತದೊತ್ತಡ ಅತೀ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ ಎಂದು ಕಲ್ಲಿಕೋಟೆ ವೈದ್ಯಕೀಯ ಕಾಲೇಜು ಶಿಶು ರೋಗ ವಿಭಾಗದ ಮುಖ್ಯಸ್ಥ ಡಾ.ಎಂ.ವಿಜಯ್ ಕುಮಾರ್ ತಿಳಿಸಿದ್ದಾರೆ. ಅಮಿತ ದೈಹಿಕ ಭಾರ ಮತ್ತು ದಪ್ಪ ದೇಹವೇ ಬಿ.ಪಿ. ಹೆಚ್ಚಾಗಲು ಕಾರಣವಾಗಿದೆ. ಈ ಕಾರಣದಿಂದ ಮಕ್ಕಳು ವೈಜ್ಞಾನಿಕ ರೀತಿಯ ವ್ಯಾಯಾಮ ಮಾಡಬೇಕು. ಆರೋಗ್ಯಕರವಾದ ಆಹಾರ ಸೇವನೆ ಅಳವಡಿಸಿಕೊಳ್ಳಬೇಕು, ಇಂತಹ ವಿದ್ಯಾರ್ಥಿಗಳನ್ನು ಪದೇ ಪದೇ ಆರೋಗ್ಯ ತಪಾಸಣೆಗೂ ಒಳಪಡಿಸಬೇಕು. 

               ಆಶಾ ವರ್ಕರ್ಸ್ ಸಮೀಕ್ಷೆ : ಆಶಾ ವರ್ಕರ್ಸ್‍ಗಳು ಮನೆ ಮನೆಗಳನ್ನು ಸಂಪರ್ಕಿಸಿ ನಡೆಸಿದ ಸಮೀಕ್ಷೆಯಲ್ಲಿ 16,26,408 ಮಂದಿಗೆ ರಕ್ತದೊತ್ತಡ(ಬಿ.ಪಿ), 13,16,080 ಮಂದಿಯಲ್ಲಿ ಮದುಮೇಹ(ಡಯಾಬಿಟೀಸ್), 6,17,147 ಮಂದಿಯಲ್ಲಿ ರಕ್ತದೊತ್ತಡ ಹಾಗು ಮಧುಮೇಹ, 1,11,931 ಮಂದಿಯಲ್ಲಿ ಕ್ಷಯ, 434725 ಮಂದಿಯಲ್ಲಿ ಶ್ವಾಶಕೋಶ ಸಂಬಂಧಿತ ರೋಗ ಹಾಗು 1,06,603 ಮಂದಿ ವಿವಿಧ ರೋಗದಿಂದ ಶಯ್ಯಾವಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಆಶಾ ವರ್ಕರ್ಸ್ ನಡೆಸಿದ ಸರ್ವೆ ವರದಿಯನ್ನು ರಾಜ್ಯ ಆರೋಗ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries