ತಿರುವನಂತಪುರ: 'ನವ ಕೇರಳ ಸದಾಸ್' ಯೋಜನೆ ವಿರುದ್ಧ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಕಾರ್ಯಕರ್ತರ ಮೇಲೆ ಪೊಲೀಸರು ನಡೆಸಿದ್ದಾರೆ ಎನ್ನಲಾದ ಹಲ್ಲೆ ವಿರೋಧಿಸಿ ಪಕ್ಷವು ಶನಿವಾರ ನಡೆಸಿದ ಡಿಜಿಪಿ ಕಚೇರಿಯತ್ತ ನಡಿಗೆ ವಿಕೋಪಕ್ಕೆ ತಿರುಗಿದೆ.
ರ‍್ಯಾಲಿ ಸಂದರ್ಭದಲ್ಲಿ ಪ್ರತಿಭಟನಾಕಾರರು ಕಲ್ಲು ಹಾಗೂ ದೊಣ್ಣೆಗಳನ್ನು ಪೊಲೀಸರತ್ತ ಎಸೆದು ಆಕ್ರೋಶ ವ್ಯಕ್ತಪಡಿಸಿದರು.
ಇದು ಕ್ಷಣಕಾಲ ಸ್ಥಳದಲ್ಲಿ ಆತಂಕ ಸೃಷ್ಟಿಸಿತು. ಗುಂಪು ಚದುರಿಸಲು ಪೊಲೀಸರು ಅಶ್ರುವಾಯು ಹಾಗೂ ಜಲಫಿರಂಗಿ ಅಸ್ತ್ರ ಬಳಸಿದ್ದಾರೆ ಎಂದು ವರದಿಯಾಗಿದೆ.
ಪಕ್ಷದ ಹಿರಿಯ ಮುಖಂಡ ಕೆ.ಸುಧಾಕರನ್, ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್ ಹಾಗೂ ಹಿರಿಯ ಮುಖಂಡ ರಮೇಶ್ ಚೆನ್ನಿತ್ತಲ ಅವರು ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಡಿಜಿಪಿ ಕಚೇರಿ ಪಕ್ಕದಲ್ಲಿ ಹಾಕಲಾಗಿದ್ದ ಮುಖ್ಯ ವೇದಿಕೆಯಲ್ಲಿ ಇವರು ಇದ್ದರು.
ಸುಧಾಕರನ್ ಅವರು ತಮ್ಮ ಭಾಷಣ ಮುಗಿಸುತ್ತಿದ್ದಂತೆ ಡಿಜಿಪಿ ಕಚೇರಿ ಮುಂದೆ ಹಾಕಲಾಗಿದ್ದ ಬ್ಯಾರಿಕೇಡ್‌ಗಳನ್ನು ಹತ್ತಿದ ಪಕ್ಷದ ಕಾರ್ಯಕರ್ತರು ಭದ್ರತೆ ಭೇದಿಸಿ ಒಳನುಗ್ಗಲು ಪ್ರಯತ್ನಿಸಿದರು. ಸತೀಶನ್ ಭಾಷಣ ಆರಂಭಿಸುವ ಹಂತದಲ್ಲಿ ಅಶ್ರುವಾಯು ಹಾಗೂ ಜಲಪಿರಂಗಿ ಪ್ರಯೋಗವನ್ನು ಪೊಲೀಸರು ನಡೆಸಿ ಗುಂಪು ಚದುರಿಸಿದರು.
ಅಶ್ರುವಾಯು ಪ್ರಯೋಗದಲ್ಲಿ ಸುಧಾಕರನ್ ಹಾಗೂ ಚಿನ್ನಿತ್ತಲ ಅವರಿಗೆ ಘಾಸಿಯಾಗಿದೆ. ತಕ್ಷಣ ಕಾರ್ಯಕರ್ತರು ಅವರನ್ನು ಸಮೀಪದಲ್ಲಿದ್ದ ಕಾರಿನೊಳಗೆ ಕೂರಿಸಿದರು. ಘಟನೆ ನಂತರ ಕಾಂಗ್ರೆಸ್ ಆಯೋಜಿಸಿದ್ದ ಪ್ರತಿಭಟನಾ ರ‍್ಯಾಲಿ ಅರ್ಧದಲ್ಲೇ ಮೊಟಕುಗೊಂಡಿತು.