ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಕಾಸರಗೋಡು ಪೆರಿಯ ಕ್ಯಾಂಪಸ್‍ನಲ್ಲಿ ಕೋವಿಡ್ ಪರೀಕ್ಷೆಯನ್ನು ಪುನರಾರಂಭಿಸಿದೆ. ಜಿಲ್ಲೆಯ ವಿವಿಧ ಆರೋಗ್ಯ ಕೇಂದ್ರಗಳಿಂದ ಸಂಗ್ರಹಿಸಲಾದ ಮಾದರಿಗಳನ್ನು ವಿಶ್ವವಿದ್ಯಾನಿಲಯದ ಜೀವರಸಾಯನಶಾಸ್ತ್ರ ಮತ್ತು ಆನ್ವಯಿಕ ಜೀವಶಾಸ್ತ್ರ ವಿಭಾಗದ ವೈರಾಲಜಿ ಲ್ಯಾಬ್‍ನಲ್ಲಿ ಪರೀಕ್ಷಿಸಲಾಗುತ್ತದೆ.
ಜಿಲ್ಲಾ ಆರೋಗ್ಯ ಇಲಾಖೆ ನಿಯೋಜಿತ ಲ್ಯಾಬ್ ತಂತ್ರಜ್ಞರ ಹೊರತಾಗಿ, ಇದು ಸಂಶೋಧನಾ ವಿದ್ಯಾರ್ಥಿಗಳ ಸೇವೆಗಳನ್ನು ಸಹ ಹೊಂದಿದೆ. 2020 ರಲ್ಲಿ, ಕೋವಿಡ್-19 ಹರಡುವಿಕೆಯು ತೀವ್ರಗತಿಯಲ್ಲಿರುವುದನ್ನು ಪರಿಗಣಿಸಿ ವಿಶ್ವವಿದ್ಯಾನಿಲಯವು ಸಾಮಾಜಿಕ ಜವಾಬ್ದಾರಿಯನ್ನು ಗಮನದಲ್ಲಿಟ್ಟುಕೊಂಡು ರೋಗತಡೆಗಟ್ಟುವ ಚಟುವಟಿಕೆಗಳನ್ನು ಕೈಗೊಂಡಿತ್ತು. ಅದೇ ವರ್ಷದ ಮಾರ್ಚ್‍ನಲ್ಲಿ, ವಿಶ್ವವಿದ್ಯಾನಿಲಯವು ಕೋವಿಡ್‍ಬಾಧಿತರನ್ನು ಪರೀಕ್ಷಿಸಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯಿಂದ (ಐಸಿಎಂಆರ್) ಅನುಮೋದನೆ ಪಡೆದುಕೊಮಡಿತ್ತು. ಜೀವರಸಾಯನಶಾಸ್ತ್ರ ಮತ್ತು ಆನ್ವಿಕ ಜೀವಶಾಸ್ತ್ರದ ಪ್ರಾಧ್ಯಾಪಕ ಮತ್ತು ವೈರಾಲಜಿಸ್ಟ್ ಡಾ. ರಾಜೇಂದ್ರ ಪಿಲಾಂಗಟ್ಟೆ ನೇತೃತ್ವ ನೀಡುತ್ತಿದ್ದಾರೆ.
ಇಲ್ಲಿಯವರೆಗೆ, ಕೋವಿಡ್ ರೋಗನಿರ್ಣಯಕ್ಕಾಗಿ ವಿಶ್ವವಿದ್ಯಾನಿಲಯವು ನಾಲ್ಕು ಲಕ್ಷಕ್ಕೂ ಹೆಚ್ಚು ಆರ್‍ಟಿಪಿಸಿಆರ್ ತಪಾಸಣೆ ನಡೆಸಲಾಗಿದೆ. ಕೋವಿಡ್‍ನ ಆನುವಂಶಿಕ ವ್ಯತ್ಯಾಸವನ್ನು ಪತ್ತೆಹಚ್ಚಲು 3,000 ಕ್ಕಿಂತ ಹೆಚ್ಚುತಪಾಸಣೆ ನಡೆಸಲಾಗಿದೆ. ಈ ಹಿಂದೆ, ವಿಶ್ವವಿದ್ಯಾನಿಲಯದಲ್ಲಿ ಪ್ರತಿದಿನ 1,500 ತಪಾಸಣೆ ನಡೆಸಲಾಗುತ್ತಿತ್ತು. ಕೋವಿಡ್ ಸಾಂಕ್ರಾಮಿಕ ವ್ಯಾಪನ ಗರಿಷ್ಠಮಟ್ಟದಲ್ಲಿದ್ದ ಸಂದರ್ಭ ವಿಶ್ವವಿದ್ಯಾನಿಲಯ ಆರಂಭಿಸಿದ ಕೋವಿಡ್ ತಪಾಸಣಾ ಲ್ಯಾಬ್ ಜಿಲ್ಲೆಯ ಜನತೆಗೆ ವರದಾನವಾಗಿ ಪರಿಣಮಿಸಿತ್ತು. ಕೋವಿಡ್ ಹರಡುವಿಕೆ ಕಡಿಮೆಯಾಗುತ್ತಿದ್ದಂತೆ ಇಲ್ಲಿ ಕೋವಿಡ್ ತಪಾಸಣೆಯನ್ನೂ ಸ್ಥಗಿತಗೊಳಿಸಲಾಗಿತ್ತು. ರಾಜ್ಯದಲ್ಲಿ ರೂಪಾಂತರಿತ ಕೋವಿಡ್ ಕಾಣಿಸಿಕೊಳ್ಳುತ್ತಿದ್ದಂತೆ ವಿಶ್ವವಿದ್ಯಾಲಯದಲ್ಲಿ ಕೋವಿಡ್ ತಪಾಸಣಾ ಕಾರ್ಯ ಆರಂಭಿಸಲಾಗಿದೆ.