ನವದೆಹಲಿ: ಅತ್ಯಾಚಾರ ಪ್ರಕರಣದಲ್ಲಿ ಮಹಿಳೆಯನ್ನು ಆರೋಪಿಯಾಗಿಸಬಹುದೇ ಅಥವಾ ಇಲ್ಲವೇ ಎಂಬ ಬಗ್ಗೆ ಭಾರತೀಯ ದಂಡ ಸಂಹಿತೆಯ (ಐಪಿಸಿ) 375ನೇ ಸೆಕ್ಷನ್‌ನಡಿ ಪರಿಶೀಲನೆ ನಡೆಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರ್ಧರಿಸಿದೆ.
ಅತ್ಯಾಚಾರ ಪ್ರಕರಣದಲ್ಲಿ ಮಹಿಳೆ ವಿರುದ್ಧ ಪ್ರಕರಣ ದಾಖಲಿಸಬಹುದೇ ಎಂಬ ಬಗ್ಗೆ ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಮತ್ತು ಸಂಜಯ್ ಕರೋಲ್ ಅವರಿದ್ದ ಪೀಠವು ಅನುಮಾನ ವ್ಯಕ್ತಪಡಿಸಿತು.
ಮಗನ ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣದಲ್ಲಿ ತಮ್ಮನ್ನು ತಪ್ಪಾಗಿ ಸಿಲುಕಿಸಲಾಗಿದೆ ಎಂದು 61 ವರ್ಷದ ವಿಧವೆಯೊಬ್ಬರು ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ.
ಅರ್ಜಿದಾರರ ಪರ ವಕೀಲ ರಿಷಿ ಮಲ್ಹೋತ್ರ ಅವರು, ಅತ್ಯಾಚಾರ ಪ್ರಕರಣದಲ್ಲಿ ಮಹಿಳೆ ವಿರುದ್ಧ ದೂರು ದಾಖಲಿಸಲು ಎಂದಿಗೂ ಸಾಧ್ಯವಿಲ್ಲ ಎಂದು ಹೇಳಿದರು. ಸಾಮೂಹಿಕ ಅತ್ಯಾಚಾರ ಪ್ರಕರಣಗಳಲ್ಲಿ ಮಹಿಳೆಯರು ಅತ್ಯಾಚಾರ ಎಸಗುವ ಉದ್ದೇಶ ಹೊಂದಿರುತ್ತಾರೆ ಎನ್ನಲಾಗುವುದಿಲ್ಲ ಎಂದು ಪ್ರಿಯಾ ಪಟೇಲ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಹೇಳಿದೆ ಎಂದು ಅವರು ತಿಳಿಸಿದರು.
ಮಹಿಳೆಯ ಅರ್ಜಿ ಕುರಿತು ನೋಟಿಸ್ ನೀಡಿದ ಕೋರ್ಟು ಆಕೆಯ ಬಂಧನಕ್ಕೆ ತಡೆಯಾಜ್ಞೆಯನ್ನೂ ನೀಡಿತು.
ಭಾರತೀಯ ಕಾನೂನಿನಡಿ 'ಅತ್ಯಾಚಾರ' ಅಪರಾಧಕ್ಕೆ ಭಾರತೀಯ ದಂಡ ಸಂಹಿತೆಯ 375ನೇ ಸೆಕ್ಷನ್ ವಿವರಣೆ ನೀಡುತ್ತದೆ. ಇದರ ಆರಂಭವು ಪುರುಷನನ್ನು ದುಷ್ಕರ್ಮಿಯೆಂದು ಪ್ರಸ್ತಾಪಿಸಿ ಆರಂಭವಾಗುತ್ತದೆ (ಪುರುಷನು ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ....). ಇದರ ಅರ್ಥ ಸಾಮಾನ್ಯವಾಗಿ ಅತ್ಯಾಚಾರ ಪ್ರಕರಣದಲ್ಲಿ ಪುರುಷನ ವಿರುದ್ಧ ಮಾತ್ರ ಪ್ರಕರಣ ದಾಖಲಿಸಲಾಗುತ್ತಿದೆ.
ಪಂಜಾಬ್‌ನಲ್ಲಿನ ವಿಚಾರಣಾ ನ್ಯಾಯಾಲಯವು ಅರ್ಜಿದಾರರ ನಿರೀಕ್ಷಣಾ ಜಾಮೀನನ್ನು ತಿರಸ್ಕರಿಸಿತ್ತು. ಹೈಕೋರ್ಟ್ ಕೂಡ ಇದನ್ನು ನಿರಾಕರಿಸಿತ್ತು.
ಮಹಿಳೆಯ ಹಿರಿಯ ಮಗ ಅಮೆರಿಕದಲ್ಲಿ ನೆಲೆಸಿದ್ದಾನೆ. ಈತ ಮತ್ತು ದೂರುದಾರ ಯುವತಿ ಫೇಸ್‌ಬುಕ್ ಮೂಲಕ ಪರಿಚಯವಾಗಿದ್ದು ವಿವಾಹವಾಗಲು ತೀರ್ಮಾನಿಸಿದರು. ದೂರುದಾರರ ಪ್ರಕಾರ ಯುವತಿಯು ಅರ್ಜಿದಾರರ ಮಗನನ್ನು ವಿಡಿಯೊ ಕಾಲ್ ಮೂಲಕ ಮದುವೆಯಾಗಿದ್ದರು. ಆದರೂ ಆಕೆ ವಿವಾಹದ ಬಳಿಕ ಅಮೆರಿಕಕ್ಕೆ ಹೋಗದೆ ಮಹಿಳೆ ಜತೆ ವಾಸವಿದ್ದರು.
ಅನೌಪಚಾರಿಕವಾಗಿ ಆಗಿರುವ ವಿವಾಹವನ್ನು ಕೊನೆಗೊಳಿಸಿಕೊಳ್ಳುವಂತೆ ಯುವತಿ ಕಡೆಯ ಕುಟುಂಬದವರು ಒತ್ತಡ ಹೇರಿದ್ದರು. ಇದರಿಂದ ತಮ್ಮ ವಿರುದ್ಧ ಮತ್ತು ತಮ್ಮ ಕಿರಿಯ ಮಗನ ವಿರುದ್ಧ ಅತ್ಯಾಚಾರದ ಸುಳ್ಳು ಪ್ರಕರಣ ದಾಖಲಿಸಲಾಯಿತು ಎಂದು ಅರ್ಜಿದಾರ ಮಹಿಳೆ ಹೇಳಿದ್ದಾರೆ. ರಾಜಿ ಕಾರಣಕ್ಕೆ ದೂರುದಾರ ಯುವತಿಗೆ ₹ 11 ಲಕ್ಷ ನೀಡಿದ್ದಾಗಿಯೂ ಅವರು ಹೇಳಿಕೊಂಡಿದ್ದಾರೆ.