ಕಾಸರಗೋಡು: ಕೇರಳ ಜಲ ಪ್ರಾಧಿಕಾರದಲ್ಲಿ ಯಾವುದೇ ಉದ್ಯೋಗ ಭದ್ರತೆಯಿಲ್ಲದೆ ಗುತ್ತಿಗೆ ಆಧಾರದಲ್ಲಿ ಕೆಲಸ ನಡೆಸುತ್ತಿರುವ ಕಾರ್ಮಿಕರಿಂದ ಆದಾಯ ತೆರಿಗೆ, ಜಿಎಸ್‍ಟಿ ಹೆಸರಲ್ಲಿ ಅನಧಿಕೃತವಾಗಿ ಗುತ್ತಿಗೆದಾರರು ಹಣ ವಸೂಲಿಮಾಡುತ್ತಿದ್ದು, ಈ ಶೋಷಣೆ ಕೊನೆಗೊಳಿಸುವಂತೆ ಕೇರಳ ವಾಟರ್ ಅಥಾರಿಟಿ ಗುತ್ತಿಗೆ ಕಾರ್ಮಿಕರ ಜಂಟಿ ಹೋರಾಟ ಸಮಿತಿ ಸಂಚಾಲಕ ಸುರೇಶ್ ಪುತ್ಯೇಡತ್ ಸುದ್ದಿಗೋಷ್ಠೀಯಲ್ಲಿ ತಿಳಿಸಿದ್ದಾರೆ.
ತಮಗೆ ಲಭಿಸುವ ಕನಿಷ್ಟ ವೇತನದಿಂದ ಶೇ. 18 ಜಿಎಸ್‍ಟಿ, ತಲಾ ಶೇ. 1 ಆದಾಯ ತೆರಿಗೆ, ಗುತ್ತಿಗೆದಾರರ ಕಲ್ಯಾಣ ನಿಧಿ ಮತ್ತು ಶೇ.5 ಲಾಭದ ಪಾಲನ್ನು 2021 ರ ಡಿಸೆಂಬರ್ ತಿಂಗಳಿನಿಂದ 2023 ಮಾರ್ಚ್ ವರೆಗೆ ಗುತ್ತಿಗೆದಾರರು ಕಾರ್ಮಿಕರಿಂದ ವಸೂಲಿ ಮಾಡಿದ್ದಾರೆ. ಕಾರ್ಮಿಕರಿಗೆ ಯಾವುದೇ ಸವಲತ್ತು ಅಥವಾ ಉದ್ಯೋಗ ಭದ್ರತೆ ಒದಗಿಸದೆ, ಕನಿಷ್ಠ ವೇತನದಿಂದ ಈ ರೀತಿ ಸುಲಿಗೆ ನಡೆಸುತ್ತಿರುವುದು ಖಂಡನೀಯ. ತಮ್ಮ ವೇತನದಿಂದ ಜಿಎಸ್‍ಟಿ ಕಸಿಯುತ್ತಿರುವ ಬಗ್ಗೆ ಕಾರ್ಮಿಕರು ಸಲ್ಲಿಸಿದ್ದ ದೂರಿನ ಮೇರೆಗೆ ರಾಜ್ಯ ಮಾನವ ಹಕ್ಕುಗಳ ಆಯೋಗ ಮಧ್ಯ ಪ್ರವೇಶಿಸಿ ಕಾರ್ಮಿಕರ ಪರ ತೀರ್ಪು ನೀಡಿತ್ತು. ಆದರೆ ನವಕೇರಳ ಸಭೆಯಲ್ಲಿ ಕಾರ್ಮಿಕರು ವ್ಯಕ್ತಪಡಿಸಿದ ಕುಂದುಕೊರತೆಗಳನ್ನು ಪರಿಹರಿಸಲಾಗಿದೆ ಎಂಬ ಜಿಲ್ಲಾ ಕಾರ್ಮಿಕ ಅಧಿಕಾರಿ ನೀಡಿರುವ ತಪ್ಪು ಉತ್ತರದ ವಿರುದ್ಧ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಲಾಗಿದೆ. ವಿಷಯದ ಗಂಭೀರತೆ ಅರ್ಥ ಮಾಡಿಕೊಳ್ಳದೆ ಅಧಿಕಾರಿಗಳೂ ಪ್ರಹಸನ ಮಾಡುತ್ತಿದ್ದಾರೆ. ಗುತ್ತಿಗೆದಾರರು ಕಾರ್ಮಿಕರ ನೋಂದಣಿಯನ್ನು ಇಟ್ಟುಕೊಳ್ಳುವಂತೆ ಒತ್ತಾಯಿಸಿ ಕಾರ್ಮಿಕರು ಈ ಹಿಂದೆ ಸಲ್ಲಿಸಿದ್ದ ದೂರನ್ನೂ ಇದೇ ಅಧಿಕಾರಿ ತಿರಸ್ಕರಿಸಿದ್ದರು. ಕೇರಳದ ಇತರ 13 ಜಿಲ್ಲೆಗಳಲ್ಲಿ ಇಲ್ಲದ ಕಾನೂನನ್ನು ಕಾಸರಗೋಡಿನಲ್ಲಿ ಜಾರಿಗೊಳಿಸುವ ಮೂಲಕ ಅಧಿಕಾರಿಗಳ ಜತೆಗೂಡಿ, ಗುತ್ತಿಗೆದಾರರು ಕಾರ್ಮಿಕರನ್ನು ಶೋಷಿಸಲು ಮುಂದಾಗಿರುವುದು ಖಂಡನೀಯ. ಈ ಮೂಲಕ ಕೆಲ ಜಲ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಜಿಲ್ಲಾ ಕಾರ್ಮಿಕ ಅಧಿಕಾರಿಗಳು ಕಾರ್ಮಿಕರನ್ನು ತಪ್ಪುಹಾದಿಗೆಳೆಯುತ್ತಿದ್ದಾರೆ. ಕಡಿಮೆ ವೇತನಕ್ಕೆ ದುಡಿಯುವ ಕಾರ್ಮಿಕರಿಗೆ ವೇತನ ಮತ್ತು ಭದ್ರತೆಯ ನೀಡದೆ, ಅನ್ಯಾಯವೆಸಗುತ್ತಿರುವುದರ ವಿರುದ್ಧ ಕಾರ್ಮಿಕರು ಪ್ರಬಲ ಹೋರಾಟಕ್ಕಿಳಿಯುವ ಅನಿವಾರ್ಯತೆ ಎದುರಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಂಟಿ ಹೋರಾಟ ಸಮಿತಿ ಅಧ್ಯಕ್ಷ ಪಿ.ಸುರ್ಜಿತ್, ಸಿ.ವಿಜಯನ್, ಸಿದ್ದಿಕ್ ಕೊಡಿಯಮ್ಮೆ, ಸುರೇಶ್ ಕಾಟಿಯಡ್ಕ ಉಪಸ್ಥಿತರಿದ್ದರು.