ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಿಕ್ಕಿದ ಆಹ್ವಾನವನ್ನು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ತಿರಸ್ಕರಿಸಿದ್ದಾರೆ. ಧರ್ಮವು ವೈಯಕ್ತಿಕ ಆಯ್ಕೆಯಾಗಿದೆ ಎಂಬುದು ತಮ್ಮ ನಂಬಿಕೆಯಾಗಿದೆ ಎಂದು ಪಕ್ಷ ಹೇಳಿಕೆಯಲ್ಲಿ ತಿಳಿಸಿದೆ.
ನಮ್ಮ ನೀತಿಯು ಧಾರ್ಮಿಕ ನಂಬಿಕೆಗಳನ್ನು ಗೌರವಿಸುವುದು ಮತ್ತು ಪ್ರತಿಯೊಬ್ಬ ವ್ಯಕ್ತಿಯ ನಂಬಿಕೆಯನ್ನು ಅನುಸರಿಸುವ ಹಕ್ಕನ್ನು ಗೌರವಿಸುವುದು. ಧರ್ಮವು ವೈಯಕ್ತಿಕ ಆಯ್ಕೆಯಾಗಿದ್ದು, ರಾಜಕೀಯ ಲಾಭಕ್ಕಾಗಿ ಪರಿವರ್ತನೆ ಮಾಡಿಕೊಳ್ಳುವ ರಾಜಕೀಯ ಸಾಧವಾಗಬಾರದು. ಹಾಗೆ ಮಾಡಲು ಆಹ್ವಾನವಿದ್ದರೂ ಸಹ ಸೀತಾರಾಂ ಯೆಚೂರಿಯವರು ಸಮಾರಂಭದಲ್ಲಿ ಭಾಗವಹಿಸುವುದಿಲ್ಲ ಎಂದು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಟ್ವಿಟ್ಟರ್ ನಲ್ಲಿ ತಿಳಿಸಿದೆ.
ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಯೆಚೂರಿ ಅವರಿಗೆ ಆಹ್ವಾನ ಬಂದಿದೆ ಎಂದು ಎಡಪಕ್ಷದ ಪಾಲಿಟ್ ಬ್ಯೂರೋ ಹೇಳಿಕೆಯಲ್ಲಿ ತಿಳಿಸಿದೆ.
ಭಾರತೀಯ ಜನತಾ ಪಕ್ಷ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ ಧಾರ್ಮಿಕ ಸಮಾರಂಭವನ್ನು ಪ್ರಧಾನ ಮಂತ್ರಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಮತ್ತು ಇತರರನ್ನು ನೇರವಾಗಿ ಒಳಗೊಂಡ ರಾಜ್ಯ ಪ್ರಾಯೋಜಿತ ಕಾರ್ಯಕ್ರಮವಾಗಿ ಪರಿವರ್ತಿಸಿರುವುದು ಅತ್ಯಂತ ದುರದೃಷ್ಟಕರ ಎಂದು ಅದು ಟೀಕಿಸಿದೆ.
ಸುಪ್ರೀಂ ಕೋರ್ಟ್ ಪುನರುಚ್ಚರಿಸಿದ ಭಾರತದಲ್ಲಿನ ಆಡಳಿತದ ಮೂಲಭೂತ ತತ್ವವೆಂದರೆ, ಸಂವಿಧಾನದ ಅಡಿಯಲ್ಲಿ ಭಾರತದಲ್ಲಿನ ರಾಜ್ಯವು ಯಾವುದೇ ಧಾರ್ಮಿಕ ಸಂಬಂಧವನ್ನು ಹೊಂದಿರಬಾರದು. ಇದನ್ನು ಆಡಳಿತವು ಉಲ್ಲಂಘಿಸುತ್ತಿದೆ ಎಂದು ಆರೋಪಿಸಿದೆ.
ಜನವರಿ 22 ರಂದು ರಾಮಮಂದಿರ ಉದ್ಘಾಟನೆಯಾಗಲಿದ್ದು, ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಂಥ ಗಣ್ಯರು ಭಾಗವಹಿಸಲಿದ್ದು, 6,000 ಕ್ಕೂ ಹೆಚ್ಚು ಜನರು ಭವ್ಯವಾದ "ಪ್ರಾಣ ಪ್ರತಿಷ್ಠಾ" ಸಮಾರಂಭದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.