ಕಾಸರಗೋಡು: ಭಾರತದಲ್ಲಿ ಬಿಜೆಪಿಯನ್ನು ಎದುರಿಸುವ ಶಕ್ತಿಯನ್ನು ಕಾಂಗ್ರೆಸ್ ಪಕ್ಷ ಮಾತ್ರ ಹೊಂದಿರುವುದಾಗಿ ಮಾಜಿ ವಿಪಕ್ಷ ನಾಯಕ ಹಾಗೂ ಎಐಸಿಸಿ ಮುಖಂಡ ರಮೇಶ್ ಚೆನ್ನಿತ್ತಲ ತಿಳಿಸಿದ್ದಾರೆ.
ಅವರು ಜಿಲ್ಲೆಯ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಕಾಸರಗೋಡಿಗೆ ಆಗಮಿಸಿದ್ದ ಸಂದರ್ಭ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ಮೂರು ರಾಜ್ಯಗಳಲ್ಲಿ ಪಕ್ಷ ಸೋಲು ಕಂಡಿದ್ದು, ಈ ಬಗ್ಗೆ ಆತ್ಮಾವಲೋಕನ ನಡೆಸಲಾಗುವುದು. ವಯನಾಡಿನಲ್ಲಿ ರಾಹುಲ್ ಗಾಂಧಿ ಸ್ಪರ್ಧಿಸುವ ವಿಚಾರದಲ್ಲಿ ಪಕ್ಷ ತೀರ್ಮಾನ ಕೈಗೊಳ್ಳಲಿದೆ. ಕೇರಳದಲ್ಲಿ ಮುಖ್ಯಮಂತ್ರಿ ಮತ್ತು ಸಚಿವರು ನಡೆಸುತ್ತಿರುವ ನವಕೇರಳ ಯಾತ್ರೆ ಸಂಪೂರ್ಣ ವಿಫಲವಾಗಿದೆ. ಸರ್ಕಾರದ ಖಜಾನೆಯಿಂದ ಕೋಟ್ಯಂತರ ರೂ. ಖರ್ಚುಮಾಡಿ ನಡೆಸುವ ಈ ಯಾತ್ರೆಯಿಂದ ಜನರಿಗೆ ಕಿಂಚಿತ್ತೂ ಪ್ರಯೋಜನವಾಗದು. ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿ ನಡೆಸುತ್ತಿರುವ ಯಾಥ್ರೆ ಸಂಪೂರ್ಣ ರಾಜಕೀಯ ಪ್ರೇರಿತವಾಗಿದೆ. ಸರ್ಕಾರದ ವೆಚ್ಚದಲ್ಲಿ ನಡೆಸುವ ಯಾತ್ರೆ ಪ್ರತಿಪಕ್ಷಗಳನ್ನು ಟೀಕಿಸಲು ನಡೆಸುವ ವೇದಿಕೆಯಾಗುತ್ತಿದೆ. ಮುಖ್ಯಮಂತ್ರಿಯಾಗಲಿ, ಸಚಿವರಾಗಲಿ ಯಾವುದೇ ದೂರನ್ನು ನೇರವಾಗಿ ಸ್ವೀಕರಿಸುತ್ತಿಲ್ಲ ಅಥವಾ ಸ್ವೀಕರಿಸಿದ ದೂರುಗಳಿಗೆ ಸೂಕ್ತ ಪರಿಹಾರವನ್ನೂ ಕಾಣಲಾಗುತ್ತಿಲ್ಲ. ಕಾಸರಗೋಡಿನಿಂದ ಆರಂಭಗೊಮಡಿರುವ ಯಾತ್ರೆಯಲ್ಲಿ ಸ್ವೀಕರಿಸಿದ ದೂರುಗಳು ಧೂಳು ಹಿಡಿಯುತ್ತಿದೆ. ಇದನ್ನು ಜನಸಾಮಾನ್ಯರೂ ಮನಗಂಡಿದ್ದಾರೆ. ಐಕ್ಯರಂಗದ ನಿಷ್ಠಾವಂತ ಕಾರ್ಯಕರ್ತರ್ಯಾರೂ ನವ ಕೇರಳ ಯತ್ರೆಯಲ್ಲಿ ಭಾಗವಹಿಸಿಲ್ಲ ಎಂದು ಚೆನ್ನಿತ್ತಲ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆ.ಪಿ. ಕುಞಕಣ್ಣನ್, ಕೆ. ನೀಲಕಂದನ್, ಪಿ.ಕೆ.ಫೈಸಲ್ ಹಾಗೂ ಪಿ.ಎ.ಅಶ್ರಫಲಿ ಉಪಸ್ಥಿತರಿದ್ದರು.