ಕಾಸರಗೋಡು: ಕೇಂದ್ರ ಸರ್ಕಾರದ ಮಾರ್ಗದರ್ಶನದಲ್ಲಿ ರಾಜ್ಯ ಪಶು ಸಂಗೋಪನಾ ಇಲಾಖೆಯ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಡಿ.1ರಿಂದ 27ರವರೆಗೆ 21 ದಿವಸಗಳ ಕಾಲ ನಾಲ್ಕನೇ ಹಂತದ ಜಾನುವಾರುಗಳ ಕಾಲು-ಬಾಯಿ ರೋಗ ತಡೆಗಾಗಿ ಲಸಿಕೆ ಹಾಕುವ ಅಭಿಯಾನ ನಡೆಯಲಿದೆ.
ಗ್ರಾಮ ಪಂಚಾಯಿತಿ, ನಗರಸಭೆ ಮಟ್ಟದಲ್ಲಿ ಮನೆ ಮನೆಗೆ ಅಥವಾ ಶಿಬಿರಗಳ ಮೂಲಕ ಸ್ಥಳೀಯಾಡಳಿತ ಸಮಿತಿಯ ತೀರ್ಮಾನದಂತೆ ಲಸಿಕೆ ವಿತರಣೆ ನಡೆಯಲಿದೆ. 20ನೇ ಜಾನುವಾರು ಗಣತಿ ಆಧರಿಸಿ ಮಾಹಿತಿ ಸಂಗ್ರಹಣೆಯ ಆಧಾರದ ಮೇಲೆ ಜಿಲ್ಲೆಯಲ್ಲಿ 73968 ಜಾನುವಾರು ಮತ್ತು 1506 ಎಮ್ಮೆಗಳಿಗೆ ಲಸಿಕೆ ಹಾಕಲಾಗುವುದು. ರಾಷ್ಟ್ರೀಯ ಚಾಲನಾ ಸಮಿತಿಯು ಕಾರ್ಯಕ್ರಮ ನಿರ್ವಹಣಾ ಏಜೆನ್ಸಿಯ ಮೂಲಕ ಅಭಿಯಾನ ನಡೆಯಲಿದೆ. 2025ರ ವೇಳೆಗೆ ದೇಶದಲ್ಲಿ ಕಾಲುಬಾಯಿ ರೋಗ ನಿಯಂತ್ರಣ ಹಾಗೂ 2030ರ ವೇಳೆಗೆ ಕಾಲುಬಾಯಿ ರೋಗ ಮುಕ್ತ ಭಾರತ ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ.