ಜೆರುಸಲೆಂ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ವಿರುದ್ಧದ ಭ್ರಷ್ಟಾಚಾರ ಪ್ರಕರಣದ ವಿಚಾರಣೆ ಸೋಮವಾರದಿಂದ ಅರಂಭವಾಗಿದೆ.
ಹಮಾಸ್ ಉಗ್ರರು ಅ.7ರಂದು ಇಸ್ರೇಲ್ ಮೇಲೆ ದಾಳಿ ನಡೆಸಿದ ಬಳಿಕ ನೆತನ್ಯಾಹು ಅವರ ವಿರುದ್ಧದ ವಿಚಾರಣೆಯನ್ನು ತಡೆಹಿಡಿಯಲಾಗಿತ್ತು.
ಇಸ್ರೇಲ್‌ನ ಲಿಕುಡ್ ಪಾರ್ಟಿಯ ವರಿಷ್ಠರೂ ಆಗಿರುವ ನೆತನ್ಯಾಹು ವಿರುದ್ಧ ಲಂಚ, ವಂಚನೆ ಮತ್ತು ನಂಬಿಕೆ ದ್ರೋಹದ ಆರೋಪಗಳಿವೆ. ಅದರೆ ಅವುಗಳನ್ನು ನೆತನ್ಯಾಹು ನಿರಾಕರಿಸಿದ್ದಾರೆ.
ಮುಂದುವರಿದ ಕಾರ್ಯಾಚರಣೆ: ದಕ್ಷಿಣ ಗಾಜಾದ ಖಾನ್ ಯೂನಿಸ್ ನಗರದಲ್ಲಿ ಹಮಾಸ್ ಮತ್ತು ಇತರ ಉಗ್ರ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಇಸ್ರೇಲ್ ಸೇನೆ ಸೋಮವಾರ ಹೇಳಿದೆ.
ಪ್ಯಾಲೆಸ್ಟೀನ್ ಅನ್ನು ಹಾದು ಹೋಗುವ ಸಲಹ್ ಅಲ್ ದಿನ್ ರಸ್ತೆಯನ್ನು ಬಳಸದಂತೆ ಇಸ್ರೇಲ್ ತಿಳಿಸಿದೆ. 'ರಸ್ತೆಯು ಯುದ್ಧ ಭೂಮಿಯನ್ನು ಹಾದು ಹೋಗಿದೆ. ಹೀಗಾಗಿ ಈ ಮಾರ್ಗವು ಅತ್ಯಂತ ಅಪಾಯಕಾರಿ' ಎಂದು ಅದು ಹೇಳಿದೆ.
ನಗರ ತೊರೆಯಲು ಸೂಚನೆ: ಪ್ಯಾಲೆಸ್ಟೀನ್‌ನ ಸಾವಿರಾರು ನಿರಾಶ್ರಿತರಿಗೆ ಸದ್ಯ ನೆಲೆಯಾಗಿರುವ ದಕ್ಷಿಣ ಗಾಜಾದ ಖಾನ್ ಯೂನಿಸ್ ನಗರದ ಮೇಲೆ ದಾಳಿ ಆರಂಭಿಸಿರುವ ಹಿನ್ನೆಲೆಯಲ್ಲಿ, ನಗರವನ್ನು ತೊರೆದು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಅಲ್ಲಿನ ಜನರಿಗೆ ಇಸ್ರೇಲ್ ಎರಡನೇ ಬಾರಿ ಕರೆ ನೀಡಿದೆ.
15 ಸಾವಿರ ಗಡಿ ದಾಟಿದ ಸಾವಿನ ಸಂಖ್ಯೆ
ಸಂಘರ್ಷದಲ್ಲಿ ಈ ವರೆಗೆ 15500 ಮಂದಿ ಮೃತಪಟ್ಟಿದ್ದು 41000 ಮಂದಿ ಗಾಯಗೊಂಡಿದ್ದಾರೆ ಎಂದು ಗಾಜಾದ ಆರೋಗ್ಯ ಇಲಾಖೆ ತಿಳಿಸಿದೆ. ಇದರಲ್ಲಿ ನಾಗರಿಕರು ಸೈನಿಕರೂ ಇದ್ದಾರೆ. ಮೃತರ ಪೈಕಿ ಶೇ 70 ಮಂದಿ ಮಹಿಳೆಯರು ಮತ್ತು ಮಕ್ಕಳು ಎಂದು ಇಲಾಖೆ ಹೇಳಿದೆ. ಡಿ.1ರಂದು ಕದನ ವಿರಾಮ ಅಂತ್ಯವಾಗುತ್ತಲೇ ಇಸ್ರೇಲ್ ದಾಳಿ ಆರಂಭಿಸಿದ್ದು ಈಗಾಗಲೇ ನೂರಾರು ಮಂದಿ ಹತರಾಗಿದ್ದಾರೆ. ಗಾಯಗೊಂಡ ಬಹುಪಾಲು ಮಂದಿಯನ್ನು ಇನ್ನೂ ಆಸ್ಪತ್ರೆಗಳಿಗೂ ಸೇರಿಸಲಾಗಿಲ್ಲ ಎಂದು ಆರೋಗ್ಯ ಇಲಾಖೆ ವಕ್ತಾರ ಆಶ್ರಫ್ ಅಲ್ ಖಾದಿರ್ ತಿಳಿಸಿದ್ದಾರೆ. ನಾಗರಿಕರ ರಕ್ಷಣೆಯಲ್ಲಿ ತೊಡಗಿದ್ದ ಪ್ಯಾಲೆಸ್ಟೀನ್‌ನ ಸ್ವಯಂ ಸೇವಕರು ಸಾವಿಗೀಡಾಗಿರುವುದಾಗಿ ನಾಗರಿಕ ರಕ್ಷಣಾ ವಿಭಾಗ ಮತ್ತು 'ರೆಡ್ ಕ್ರೆಸೆಂಟ್' ಮಾನವೀಯ ಸಂಘಟನೆ ತಿಳಿಸಿದೆ.
ದೋಹಾದಲ್ಲಿದ್ದ ತನ್ನ ಸಂಧಾನಕಾರರನ್ನು ಇಸ್ರೇಲ್ ಹಿಂದಕ್ಕೆ ಕರೆಸಿಕೊಂಡಿದ್ದು ಮತ್ತೊಂದು ಕದನ ವಿರಾಮದ ನಿರೀಕ್ಷೆ ಮಸುಕಾಗಿದೆ. ಇತ್ತ ಶಾಶ್ವತ ಕನದ ವಿರಾಮ ಘೋಷಿಸದ ಹೊರತು ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ಕುರಿತ ಮಾತುಕತೆಗೆ ಹಮಾಸ್ ನಿರಾಕರಿಸಿದೆ.
ವಿರಾಮದ ನಂತರ ಮತ್ತೆ ಸಂಕಷ್ಟ ಕದನ ವಿರಾಮದ ಹಿನ್ನೆಲೆಯಲ್ಲಿ ದೊರೆತೆ ಒಂದು ವಾರದ ಬಿಡುವಿನಲ್ಲಿ ಪ್ಯಾಲೆಸ್ಟೀನ್ ನಾಗರಿಕರು ಅಗತ್ಯ ವಸ್ತುಗಳು ಮತ್ತು ಆಹಾರ ಪದಾರ್ಥಗಳನ್ನು ಸಂಗ್ರಹಿಸಿಕೊಳ್ಳಲು ಪ್ರಯತ್ನಿಸಿದರು. ಜತೆಗೆ ತಮ್ಮ ಕುಟುಂಬಸ್ಥರ ಮೃತದೇಹಗಳ ಅಂತ್ಯಕ್ರಿಯೆ ನಡೆಸಿದರು. ಆದರೆ ಕದನ ವಿರಾಮ ಅಂತ್ಯಗೊಳ್ಳುತ್ತಲೇ ಬಾಂಬ್ ಭೂ ದಾಳಿ ಅರಂಭವಾಗಿದ್ದು ಈಗ ಮತ್ತೆ ಸಂಕಷ್ಟಕ್ಕೆ ಗುರಿಯಾಗಿದ್ದಾರೆ.
ಫೈಟರ್ ಜೆಟ್‌ಗಳು ಹೆಲಿಕಾಪ್ಟರ್‌ಗಳು ಗಾಜಾವನ್ನು ಧ್ವಂಸಗೊಳಿಸಿವೆ ಎಂದು ಹೇಳಿರುವ ಇಸ್ರೇಲ್ ಮುಂದಿನ ದಿನಗಳಲ್ಲಿ ಖಾನ್ ಯೂನಿಸ್ ನಗರದ ಮೇಲೆ ತೀವ್ರ ದಾಳಿ ನಡೆಸುವುದಾಗಿ ಸ್ಪಷ್ಟವಾಗಿ ತಿಳಿಸಿದೆ.
ಆರು ಥಾಯ್ ಒತ್ತೆಯಾಳುಗಳು ತಾಯ್ನಾಡಿಗೆ ಬ್ಯಾಂಕಾಕ್ (ರಾಯಿಟರ್ಸ್):ಹಮಾಸ್ ಬಂಡುಕೋರರು ಬಿಡುಗಡೆ ಮಾಡಿದ್ದ ಥಾಯ್ಲೆಂಡ್ ಒತ್ತೆಯಾಳುಗಳ ಎರಡನೇ ತಂಡವನ್ನು ತಾಯ್ನಾಡಿಗೆ ಕರೆತಂದಿರುವುದಾಗಿ ಥಾಯ್ಲೆಂಡ್‌ನ ವಿದೇಶಾಂಗ ಇಲಾಖೆ ಸೋಮವಾರ ತಿಳಿಸಿದೆ. ತಮ್ಮನ್ನು ಸುರಕ್ಷಿತವಾಗಿ ಕರೆತಂದಿದ್ದಕ್ಕಾಗಿ ಆರು ಮಂದಿ ಕೃಷಿ ಕಾರ್ಮಿಕರು ಥಾಯ್ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ. ಆರು ಮಂದಿಯ ಪೈಕಿ ಒಬ್ಬ ವ್ಯಕ್ತಿಗೆ ಹೊಟ್ಟೆ ಭಾಗದಲ್ಲಿ ಗಾಯವಾಗಿದೆ. ಒತ್ತೆಯಾಗಿದ್ದ ವೇಳೆ ಈ ಗಾಯವಾಗಿತ್ತು ಎನ್ನಲಾಗಿದೆ.
ಯುದ್ಧಕ್ಕೂ ಮುನ್ನ 30 ಸಾವಿರಕ್ಕೂ ಅಧಿಕ ಥಾಯ್ ಕಾರ್ಮಿಕರು ಇಸ್ರೇಲ್‌ನ ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರು. ಥಾಯ್ ನಾಗರಿಕರು ಇಸ್ರೇಲ್‌ನಲ್ಲಿ ಅತಿ ದೊಡ್ಡ ವಲಸಿಗ ಸಮೂಹ ಎನಿಸಿಕೊಂಡಿದ್ದರು. ಅಕ್ಟೋಬರ್ 7ರ ದಾಳಿ ವೇಳೆ 32 ಥಾಯ್ ಪ್ರಜೆಗಳನ್ನು ಹಮಾಸ್ ಬಂಡುಕೋರರು ಕೊಂದಿದ್ದರು.39 ಮಂದಿಯನ್ನು ಅಪಹರಿಸಿದ್ದರು ಎಂದು ಸರ್ಕಾರ ಹೇಳಿತ್ತು.
17 ಥಾಯ್ ಒತ್ತೆಯಾಳುಗಳು ಕಳೆದ ವಾರ ಸುರಕ್ಷಿತವಾಗಿ ಸ್ವದೇಶಕ್ಕೆ ಮರಳಿದ್ದರು.