HEALTH TIPS

ಹೃದಯಕ್ಕೆ ಒಪ್ಪುವ ಆಹಾರ

 ಹೃದಯದ ಮಿಡಿತ ಜೀವಂತಿಕೆಯ ಸಂಕೇತ. ಭ್ರೂಣಾವಸ್ಥೆಯಲ್ಲಿ ಆರಂಭವಾಗುವ ಹೃದಯದ ಕೆಲಸ ನಮ್ಮ ಜೀವನ ಕೊನೆಗೊಳ್ಳುವವರೆಗೆ ಸಾಗುತ್ತಲೇ ಇರುತ್ತದೆ. ಶರೀರದ ಇತರ ಭಾಗಗಳಂತೆ ಅನಾರೋಗ್ಯಗಳು ಹೃದಯವನ್ನೂ ಕಾಡುತ್ತವೆ. ಅಧಿಕ ರಕ್ತದೊತ್ತಡ, ಹೃದಯಾಘಾತ, ಹೃದಯದ ವೈಫಲ್ಯ, ಹೃದಯ ಮಿಡಿತದ ಲಯಬದ್ಧತೆಯಲ್ಲಿ ಏರುಪೇರು - ಹೀಗೆ ಹೃದಯ ಸಂಬಂಧಿ ಕಾಯಿಲೆಗಳಿವೆ.

ಇವುಗಳ ನಿರ್ವಹಣೆಯಲ್ಲಿ ಔಷಧಗಳು ಮತ್ತು ಜೀವನಶೈಲಿ ಎಷ್ಟು ಮುಖ್ಯವೋ, ಆಹಾರ ಕೂಡ ಅಷ್ಟೇ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹೃದ್ರೋಗಗಳನ್ನು ತಡೆಗಟ್ಟುವಲ್ಲಿ ಮತ್ತು ಅವು ಮತ್ತೆ ಮರುಕಳಿಸದಂತೆ ನಿಭಾಯಿಸುವಲ್ಲಿ ಆಹಾರಸೇವನೆಯ ಶಿಸ್ತು ಪರಿಣಾಮಕಾರಿ.

ಆಹಾರಸೇವನೆಯ ಮೊದಲ ನಿಯಮ ಶರೀರದ ತೂಕವನ್ನು ಆರೋಗ್ಯಕರ ಮಿತಿಯಲ್ಲಿ ಇಟ್ಟುಕೊಳ್ಳುವುದು. ಶರೀರದ ತೂಕ ಅಧಿಕವಾದಷ್ಟೂ ರಕ್ತಪೂರೈಕೆಯ ಅಗತ್ಯ ಹೆಚ್ಚುತ್ತದೆ. ಈ ಹೊಣೆ ನಿರ್ವಹಿಸುವುದು ಹೃದಯ. ಹೀಗಾಗಿ, ಹೃದಯದ ಮೇಲೆ ಬೊಜ್ಜು ನೇರವಾಗಿ ಒತ್ತಡವನ್ನು ಬೀರುತ್ತದೆ. ಬೇರೆ ಯಾವುದೇ ಶ್ರಮದ ಕೆಲಸ ಮಾಡದಿದ್ದರೂ, ಕೇವಲ ದೇಹದ ತೂಕ ಹೆಚ್ಚಾಗಿದ್ದರೆ, ಹೃದಯಕ್ಕೆ ಶ್ರಮದಾಯಕ ಕೆಲಸ ಮಾಡಿದಷ್ಟೇ ಅನುಭವವಾಗುತ್ತದೆ. ಹೀಗಾಗಿ, ಹೃದ್ರೋಗಿಗಳು ಶರೀರದ ಅಗತ್ಯಕ್ಕೆ ಬೇಕಾದಷ್ಟು ಆಹಾರವನ್ನು ಮಾತ್ರ ಸೇವಿಸುವುದು ಸೂಕ್ತ. ಅನಗತ್ಯ ಕ್ಯಾಲರಿಗಳಿಂದ ದೂರವಿರುವುದು ಹೃದಯದ ಚೇತರಿಕೆಗೆ ಸಹಕಾರಿ. ಈ ನಿಟ್ಟಿನಲ್ಲಿ ಆಹಾರತಜ್ಞರು ನೆರವಾಗುತ್ತಾರೆ. ಹೃದಯಚಿಕಿತ್ಸೆ ನೀಡಬಲ್ಲ ಪ್ರತಿಯೊಂದು ಆಸ್ಪತ್ರೆಯಲ್ಲೂ ಆಹಾರತಜ್ಞರ ಉಪಸ್ಥಿತಿ ಇರುತ್ತದೆ.


ಹಣ್ಣು ಮತ್ತು ತರಕಾರಿಗಳನ್ನು ಸಾಕಷ್ಟು ಪ್ರಮಾಣದಲ್ಲಿ ಸೇವಿಸುವುದು ಹೃದಯಸ್ನೇಹಿಯಾದ ಪದ್ಧತಿ. ತೀರಾ ಕೆಲವನ್ನು ಹೊರತುಪಡಿಸಿ ಹೃದ್ರೋಗಿಗಳಿಗೆ ವೈವಿಧ್ಯಮಯ ಸಸ್ಯಜನ್ಯ ಆಹಾರಗಳ ಆಯ್ಕೆಯಿದೆ. ಬಿಳಿಯ ಬಣ್ಣದವುಗಳಿಗಿಂತಲೂ ಗಾಢ ಬಣ್ಣದ ಹಣ್ಣುಗಳು ಮತ್ತು ತರಕಾರಿಗಳಲ್ಲಿ ಪೋಷಕಾಂಶಗಳು ಸಮೃದ್ಧವಾಗಿರುತ್ತವೆ. ಹಣ್ಣಿನ ರಸಕ್ಕಿಂತಲೂ ಇಡೀ ಹಣ್ಣುಗಳು ಆರೋಗ್ಯಕರ. ಸಾಧ್ಯವಾದಷ್ಟೂ ಸಕ್ಕರೆ ಅಥವಾ ಉಪ್ಪನ್ನು ಬೆರೆಸದೆ ಹಣ್ಣು, ತರಕಾರಿಗಳನ್ನು ಸೇವಿಸುವುದು ಉತ್ತಮ. 'ರುಚಿಗೆ ತಕ್ಕಷ್ಟು ಉಪ್ಪು' ಎನ್ನುವ ಬದಲಿಗೆ 'ಆರೋಗ್ಯಕ್ಕೆ ತಕ್ಕಷ್ಟು ಉಪ್ಪು' ಎನ್ನುವುದು ಸರಿ!

ಆಹಾರಧಾನ್ಯಗಳ ವಿಷಯದಲ್ಲೂ ಸಂಸ್ಕರಿತ ಧಾನ್ಯಗಳಿಗಿಂತಲೂ ಇಡೀ ಧಾನ್ಯಗಳು ಉಪಯುಕ್ತ. ಸಮಗ್ರ ಧಾನ್ಯಗಳಲ್ಲಿ ನಾರಿನ ಅಂಶ, ವಿಟಮಿನ್'ಗಳು, ಪಿಷ್ಠದ ಗುಣಮಟ್ಟ ಅಧಿಕವಾಗಿರುತ್ತದೆ. ಇದರಿಂದ ಹೃದ್ರೋಗ, ಪಾರ್ಶ್ವವಾಯು, ಮಧುಮೇಹ, ಬೊಜ್ಜು, ಮಲಬದ್ಧತೆ ಕಡಿಮೆಯಾಗುತ್ತದೆ. ಕರುಳಿನ ಆರೋಗ್ಯ ಸುಧಾರಿಸುತ್ತದೆ. ಅಂತೆಯೇ, ಒಳ್ಳೆಯ ಗುಣಮಟ್ಟದ ಪ್ರೋಟೀನ್ ಇರುವ ಬೇಳೆಕಾಳುಗಳು ಕೂಡ ಹೃದಯದ ಆರೋಗ್ಯಕ್ಕೆ ಸಹಾಯಕಾರಿ. ಅಧಿಕ ರಕ್ತದೊತ್ತಡಕ್ಕೆ ಸಂಬಂಧಿಸಿದ ಯಾವುದೇ ಕಾಯಿಲೆಯ ನಿಯಂತ್ರಣ ಮತ್ತು ನಿರ್ವಹಣೆಯಲ್ಲಿ ಸಸ್ಯಜನ್ಯ ಪ್ರೋಟೀನ್ ಸೇವನೆಯು ಮಾಂಸಜನ್ಯ ಪ್ರೋಟೀನ್‌ಗಿಂತಲೂ ಉತ್ತಮ ಎಂದು ಸಂಶೋಧನೆಗಳಿಂದ ದೃಢಪಟ್ಟಿದೆ. ಪ್ರಾಣಿಜನ್ಯ ಪ್ರೋಟೀನ್‌ನ ಆಯ್ಕೆಗಳಲ್ಲಿ ಮೀನು ಮತ್ತು ಸಮುದ್ರಜೀವಿಗಳು ಹೃದಯದ ಆರೋಗ್ಯಕ್ಕೆ ಒಳಿತು. ಎಣ್ಣೆಯಲ್ಲಿ ಕರಿದ ಮತ್ತು ಸಂಸ್ಕರಿತ ಮಾಂಸವನ್ನು ಹೃದ್ರೋಗಿಗಳು ದೂರವಿಡಬೇಕೆಂದು ತಜ್ಞರ ಅಭಿಮತ. ಕಡಿಮೆ ಜಿಡ್ಡಿನ ಅಂಶದ ಡೇರಿ ಪದಾರ್ಥಗಳು ತೂಕದ ನಿರ್ವಹಣೆಯಲ್ಲೂ ಸಹಕಾರಿ. ಇವು ರಕ್ತದಲ್ಲಿ ಅಪಾಯಕಾರಿ ಕೊಲೆಸ್ಟ್ರಾಲ್ ಅಂಶವನ್ನು ತಗ್ಗಿಸಿ, ಹೃದ್ರೋಗದ ಸಾಧ್ಯತೆಗಳನ್ನು ಇಳಿಸುತ್ತವೆ. ಸಕ್ಕರೆ ಮತ್ತು ಉಪ್ಪುಯುಕ್ತ ಡೇರಿ ಪದಾರ್ಥಗಳ ಬದಲಿಗೆ ಇಂತಹ ಯಾವುದೇ ಬೆರಕೆ ಇಲ್ಲದವುಗಳ ಬಳಕೆ ಉತ್ತಮ. ಸಂಸ್ಕರಿತ ಜಿಡ್ಡು ಅಥವಾ ಬೆಣ್ಣೆಯ ಬದಲಿಗೆ ಸಸ್ಯಜನ್ಯ ಎಣ್ಣೆಯ ಬಳಕೆ ಹೃದಯಕ್ಕೆ ಕ್ಷೇಮಕರ ಎಂದು ಅಧ್ಯಯನಗಳು ತಿಳಿಸಿವೆ.

ಅಧಿಕ ಸಕ್ಕರೆಯ ಬಳಕೆ ಹೃದ್ರೋಗಕ್ಕೆ ನೇರ ದಾರಿ. ಸಕ್ಕರೆ ಎಂದರೆ ಕೇವಲ ಹರಳು ಸಕ್ಕರೆ ಎಂದಷ್ಟೇ ಅಲ್ಲ. ಮೂಲತಃ ಗ್ಲೂಕೋಸ್, ಫ್ರಕ್ಟೋಸ್ ಮೊದಲಾದ ಸರಳ ಸಕ್ಕರೆಯ ಅಂಶವಿರುವ ಯಾವುದೇ ಪದಾರ್ಥವೂ ಸಕ್ಕರೆಯ ಲೆಕ್ಕಕ್ಕೇ ಬರುತ್ತದೆ. ಬೆಲ್ಲ, ಜೇನು, ಮೇಪಲ್ ಸಿರಪ್, ಕಾರ್ನ್ ಸಿರಪ್ ಮೊದಲಾದ ಯಾವುದೇ ಸಿಹಿಕಾರಿ ವಸ್ತುವನ್ನೂ ಸಕ್ಕರೆ ಎಂದೇ ಪರಿಗಣಿಸಬೇಕು. ಆಹಾರದಲ್ಲಿ ಸರಳ ಸಕ್ಕರೆ ಹೆಚ್ಚಾದಷ್ಟೂ ಕಾಯಿಲೆರಹಿತ ಜೀವಿತಾವಧಿ ಕಡಿಮೆಯಾಗುತ್ತದೆ. ಸಕ್ಕರೆಯ ಬದಲಿಗೆ ಕಡಿಮೆ ಕ್ಯಾಲರಿಯುಕ್ತ ಸಿಹಿಕಾರಿ ರಾಸಾಯನಿಕ ಬಳಕೆಯ ಪ್ರತಿಪಾದನೆಯಿದೆ. ಆದರೆ ಇಂತಹ ರಾಸಾಯನಿಕಗಳು ಮಿದುಳಿನ, ಕರುಳಿನ ಮತ್ತು ಒಟ್ಟಾರೆ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ತಜ್ಞರು ಸಂಶಯಿಸಿದ್ದಾರೆ. ಅಧಿಕ ಉಪ್ಪಿನ ಬಳಕೆ ಮತ್ತು ಅಧಿಕ ರಕ್ತದೊತ್ತಡಗಳ ಸಂಬಂಧ ಈಗಾಗಲೇ ಸ್ಥಿರವಾಗಿದೆ. ನಲವತ್ತರ ವಯಸ್ಸಿನ ನಂತರ ಉಪ್ಪಿನ ಬಳಕೆಯನ್ನು ಕಡಿತಗೊಳಿಸುತ್ತಾ ಹೋಗುವುದು ಅಧಿಕ ರಕ್ತದೊತ್ತಡದ ಸಮಸ್ಯೆ ಇಲ್ಲದವರಿಗೂ ಉಪಯುಕ್ತ.

ಯಾವುದೇ ವಯಸ್ಸಿನಲ್ಲೂ ಮದ್ಯಪಾನ ಹೃದ್ರೋಗಕ್ಕೆ ದಾರಿ ಮಾಡಬಲ್ಲದು. ಸಣ್ಣ ವಯಸ್ಸಿನಲ್ಲೇ ತೀವ್ರ ಹೃದಯಾಘಾತಕ್ಕೆ ಒಳಗಾಗುವ ಬಹುತೇಕ ಮಂದಿ ಸಾಮಾಜಿಕ ಯಾ ವೈಯಕ್ತಿಕ ಕಾರಣಗಳಿಗಾಗಿ ಕೆಲಕಾಲವಾದರೂ ಮದ್ಯಸೇವನೆ ಮಾಡಿರುತ್ತಾರೆ ಎಂದು ಸಂಶೋಧನೆಗಳು ತಿಳಿಸಿವೆ. ಇದರ ಕಾಲಾವಧಿ ಮತ್ತು ಪ್ರಮಾಣ ಒಬ್ಬೊಬ್ಬರಲ್ಲಿ ಒಂದೊಂದು ರೀತಿ ಇರಬಹುದು. ಹೃದಯ ಮತ್ತು ಮಿದುಳು ಸಂಬಂಧಿ ದೀರ್ಘಾವಧಿ ಕಾಯಿಲೆಗಳಿಗೆ ಮದ್ಯಪಾನ ಕಾರಣವಾಗುತ್ತದೆ. ಮಿತವಾದ ಮದ್ಯಪಾನ ಒಳಿತು ಎಂದು ಹಲವರು ಪ್ರತಿಪಾದಿಸಿದರೂ ಇದಕ್ಕೆ ಪುಷ್ಟಿ ನೀಡುವ ಗಟ್ಟಿಯಾದ ವೈಜ್ಞಾನಿಕ ಆಧಾರ ಇಲ್ಲ.

ಆಹಾರ ನಮ್ಮ ಜೀವನಸಂಗಾತಿಯಷ್ಟೇ ಅಲ್ಲ; ಉತ್ತಮ ಆರೋಗ್ಯವನ್ನು ಪ್ರಸಾದಿಸುವ ಸಂಜೀವಿನಿ ಕೂಡ. ಹೃದಯ, ಮಿದುಳು ಸೇರಿದಂತೆ ಹಲವಾರು ಅಂಗಗಳ ದೀರ್ಘಕಾಲಿಕ ಕಾಯಿಲೆಗಳ ನಿಯಂತ್ರಣ ಮತ್ತು ನಿರ್ವಹಣೆಗೆ ಆರೋಗ್ಯಕರ ಆಹಾರ ರಹದಾರಿ.


Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries