ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಸೇರಿದಂತೆ ಪ್ರಮುಖ ನಾಯಕರಿಗೆ ಕಾರ್ಯಕ್ರಮಕ್ಕೆ ಆಹ್ವಾನ ಬಂದಿದ್ದು, ಸಮಾರಂಭದಲ್ಲಿ ಭಾಗವಹಿಸುವ ಕುರಿತು ಕಾಂಗ್ರೆಸ್ ತನ್ನ ನಿಲುವನ್ನು ಬಹಿರಂಗಪಡಿಸಿಲ್ಲ. ಈ ನಡುವೆ ಸಮಾರಂಭದಲ್ಲಿ ಭಾಗವಹಿಸುವ ಮೂಲಕ ಕಾಂಗ್ರೆಸ್ ಮೃದು ಹಿಂದುತ್ವವನ್ನು ಪ್ರದರ್ಶಿಸುವ ತವಕದಲ್ಲಿದೆ ಎಂದು 'ಸಮಸ್ತ'(ಕೇರಳದ ಮುಸ್ಲಿಂ ಸುನ್ನಿ ಸಂಘಟನೆ) ಅಸಮಾಧಾನ ವ್ಯಕ್ತಪಡಿಸಿದೆ.
'ಯಾವುದೇ ಕಾರಣಕ್ಕೂ ಉದ್ಘಾಟನಾ ಸಮಾರಂಭದಲ್ಲಿ ಕಾಂಗ್ರೆಸ್ ಭಾಗವಹಿಸಬಾರದು ಎಂಬುದು ಕೇರಳ ರಾಜ್ಯ ಘಟಕದ ಮುಖಂಡರ ನಿರ್ಧಾರ. ಈ ನಿರ್ಧಾರವನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ ಅವರಿಗೆ ತಿಳಿಸಲಾಗಿದೆ' ಎಂದು ಮುರಳೀಧರನ್ ಅವರು ಸುದ್ದಿಗಾರರಿಗೆ ಹೇಳಿದರು.
'ಕಾಂಗ್ರೆಸ್ ರಾಷ್ಟ್ರೀಯ ಪಕ್ಷವಾಗಿದ್ದು, ಬಿಜೆಪಿ ವಿರುದ್ಧ ಇಂಡಿಯಾ ಮೈತ್ರಿಕೂಟವನ್ನು ಮುನ್ನೆಡೆಸುತ್ತಿದೆ. ರಾಷ್ಟ್ರೀಯ ನಾಯಕತ್ವದೊಂದಿಗೆ ಚರ್ಚಿಸಿದ ನಂತರ ಈ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು' ಎಂದೂ ಅವರು ತಿಳಿಸಿದರು.
ಮುರಳೀಧರನ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸುವ ಸುಧಾಕರನ್, 'ಅವರನ್ನೇ(ಮುರಳೀಧರನ್) ಕೇಳಿ' ಎಂದಿದ್ದಾರೆ.
'ಈ ವಿಷಯದ ಬಗ್ಗೆ ರಾಜ್ಯ ಘಟಕ ಯಾವ ನಿಲುವನ್ನು ತಾಳಿಲ್ಲ. ನಮ್ಮ ನಿಲುವೇನು ಎಂದು ರಾಷ್ಟ್ರೀಯ ನಾಯಕರು ಕೇಳಿದರೆ ನಾವು ಅವರಿಗೆ ತಿಳಿಸುತ್ತೇವೆ' ಎಂದು ಸುಧಾಕರನ್ ಹೇಳಿದ್ದಾರೆ.
ರಾಮ ಮಂದಿರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವ ಕುರಿತಂತೆ ಸಿಪಿಐ(ಎಂ) ಮತ್ತು ಟಿಎಂಸಿ, ಸಮಾಜವಾದಿ ಪಕ್ಷ ತನ್ನ ನಿಲುವನ್ನು ಸ್ಪಷ್ಟಪಡಿಸಿವೆ. ಸಮಾರಂಭವನ್ನು ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮವೆಂದು ಆರೋಪಿಸಿರುವ ಸಿಪಿಐ(ಎಂ), ಟಿಎಂಸಿ ಪಕ್ಷಗಳು ಸಮಾರಂಭದಿಂದ ದೂರವಿರಲು ನಿರ್ಧರಿಸಿದರೆ, ಸಮಾಜವಾದಿ ಪಕ್ಷ ಭಾಗವಹಿಸುವುದಾಗಿ ತಿಳಿಸಿದೆ.