ಕಾಸರಗೋಡು: ಕ್ರಿಸ್‍ಮಸ್ ಹಾಗೂ ಹೊಸ ವರ್ಷಾಚರಣೆ ಸಮೀಪ ಬರುತ್ತಿದ್ದಂತೆ ಕೇರಳದಲ್ಲಿ ಕರೊನಾ ಮತ್ತೆ ವಕ್ಕರಿಸಿದ್ದು, ಕಾಸರಗೋಡು ಜಿಲ್ಲೆಯಲ್ಲೂ ಭೀತಿಯ ವಾತಾವರಣ ಎದುರಾಗಿದೆ. ಕರೊನಾ ವೈರಾಣುವಿನ ರೂಪಾಂತರಿತ ಹೊಸ ಉಪತಳಿ ಜೆಎನ್-1 ಕುರಿತಾದ ಆತಂಕವೂ ಮನೆಮಾಡಿದ್ದು, ಜನತೆ ಮತ್ತೆ ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮದತ್ತ ತೆರಳುವುದು ಅನಿವಾರ್ಯವಾಗಿದೆ.
ಕಾಸರಗೋಡು ಜಿಲ್ಲೆಯಲ್ಲಿ ಎರಡು ಸಜೀವ ಪ್ರಕರಣ ದಾಖಲಾಗಿದ್ದು, 30ಮಂದಿ ಶಂಕಿತರಿದ್ದಾರೆ. ಇವರೆಲ್ಲರೂ ಅವರವರ ಮನೆಗಳಲ್ಲಿ ನಿಗಾದಲ್ಲಿದ್ದಾರೆ. ಈ ಬಗ್ಗೆ ಭೀತಿ ಪಡಬೇಕಾದ ಅಗತ್ಯವಿಲ್ಲ. ತಪಾಸಣೆ ವೇಳೆ ಕರೊನಾ ಸೋಂಕು ಪತ್ತೆ ಸಾಮಾನ್ಯವಾಗಿದೆ. ಹೊಸ ಉಪತಳಿಯಿಂದಲೂ ಗಂಭೀರ ಆರೋಗ್ಯ ಸಮಸ್ಯೆ ಉಂಟಾಗುವ ಸಾಧ್ಯತೆ ಇಲ್ಲ ಎಂಬುದಾಗಿ ಜಿಲ್ಲಾ ವೈದ್ಯಾಧಿಕಾರಿ ಡಾ. ಎ.ವಿ ರಾಮದಾಸ್ ತಿಳಿಸಿದ್ದಾರೆ.
ಕೇರಳಾದ್ಯಂತ ಕರೊನಾ ವೈರಸ್‍ನ ರೂಪಾಂತರಿತ ತಳಿ ಜೆಎನ್-1 ಸೋಂಕು ವ್ಯಾಪಿಸುತ್ತಿದ್ದು, ಇದುವರೆಗೆ 292 ಮಂದಿಯಲ್ಲಿ ಪತ್ತೆಯಾಗಿದೆ. ಜತೆಗೆ ರಾಜ್ಯದಲ್ಲಿ ಕೋವಿಡ್ ಟೆಸ್ಟಿಂಗ್ ಪ್ರಮಾಣವನ್ನೂ ಹೆಚ್ಚಿಸಲಾಗಿದೆ.
ಕೇರಳದಲ್ಲಿ ಈಗಾಗಲೇ ಜೆಎನ್-1 ಸೋಂಕು ಪತ್ತೆಯಾಗಿದ್ದು, ಸೋಕು ವ್ಯಾಪಿಸುವುದನ್ನು ತಡೆಗಟ್ಟಲು ಸಾಧ್ಯವಿದೆ. ತೀವ್ರ ಜ್ವರ, ಗಂಟಲು ಕೆರೆತದಿಂದ ಕೂಡಿದ ಒಣಕೆಮ್ಮು ಹಾಗೂ ಉಸಿರಟಕ್ಕೆ ತೊಂದರೆಯಾಗುವುದು ಪ್ರಮುಖ ಲಕ್ಷಣವಾಗಿದೆ. ಸೀನುವಿಕೆ, ವ್ಯಕ್ತಿ ಸಂಪರ್ಕ, ಗುಂಪಾಗಿ ಸೇರುವುದರಿಂದಲೂ ರೋಗ ವ್ಯಾಪಿಸಲು ಸಾಧ್ಯವಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಮಾಸ್ಕ್ ಧರಿಸುವಿಕೆ, ಪದೇಪದೆ ಕೈತೊಳೆಯುವುದು, ಸೋಂಕಿತರಿಂದ ಅಂತರ ಪಾಲಿಸುವುದರ ಜತೆಗೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆಯೂ ಸೂಚಿಸಲಾಗಿದೆ.