ನವದೆಹಲಿ: ಭಾರತ ಕುಸ್ತಿ ಫೆಡರೇಶನ್‌ನ (ಡಬ್ಲ್ಯುಎಫ್‌ಐ) ಮಾಜಿ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು 'ಈಗ ನನಗೂ ಕುಸ್ತಿಗೂ ಯಾವುದೇ ಸಂಬಂಧವಿಲ್ಲ. ನನ್ನ ಮುಂದಿನ ಗುರಿ ಲೋಕಸಭೆ ಚುನಾವಣೆ ಅಷ್ಟೇ. WFI ಅಮಾನತು ಕುರಿತಂತೆ ಹೊಸದಾಗಿ ಆಯ್ಕೆಯಾದ ಸಂಸ್ಥೆ ಈಗ ಅದನ್ನು ನೋಡಿಕೊಳ್ಳುತ್ತದೆ ಎಂದು ಹೇಳಿದ್ದಾರೆ.
ಕ್ರೀಡಾ ಸಚಿವಾಲಯವು ಮುಂದಿನ ಆದೇಶದವರೆಗೆ ಡಬ್ಲ್ಯುಎಫ್‌ಐ ಅನ್ನು ಅಮಾನತುಗೊಳಿಸಿದ ನಂತರ ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಅವರನ್ನು ಭೇಟಿಯಾದರು. ಆ ನಂತರ ಬ್ರಿಜ್ ಭೂಷಣ್ ಸಿಂಗ್ ಈ ಹೇಳಿಕೆ ನೀಡಿದ್ದಾರೆ.
WFIನ ನೂತನ ಅಧ್ಯಕ್ಷ ಸಂಜಯ್ ಸಿಂಗ್ ಅವರ ಎಲ್ಲಾ ನಿರ್ಧಾರಗಳನ್ನು ತಡೆಹಿಡಿಯಲಾಗಿದೆ. ಈ ಹಿನ್ನೆಲೆಯಲ್ಲಿ ಬ್ರಿಜ್ ಭೂಷಣ್ ನಡ್ಡಾ ಅವರನ್ನು ಭೇಟಿ ಮಾಡಿದ್ದಾರೆ ಎಂಬ ಊಹಾಪೋಹಗಳಿದ್ದವು, ಆದರೆ ಸಭೆಯ ನಂತರ ಬ್ರಿಜ್ ಭೂಷಣ್ ಸಿಂಗ್ ಇನ್ನು ಮುಂದೆ ಕುಸ್ತಿಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು. ಅಮಾನತಿನ ನಂತರ ಏನು ಮಾಡಬೇಕೋ ಅದನ್ನು ಕುಸ್ತಿ ಒಕ್ಕೂಟದ ಕಾರ್ಯನಿರ್ವಾಹಕರು ಮಾಡುತ್ತಾರೆ. ಅದರಲ್ಲಿ ನನ್ನ ಹಸ್ತಕ್ಷೇಪವಿಲ್ಲ ಎಂದರು.
ಒಕ್ಕೂಟಕ್ಕೂ ನನಗೂ ಯಾವುದೇ ಸಂಬಂಧವಿಲ್ಲ
ಈಗ ಫೆಡರೇಶನ್‌ಗೆ ಏನಾಗುತ್ತದೆ ಎಂಬುದು ನನ್ನ ಕಾಳಜಿಯ ವಿಷಯವಲ್ಲ ಎಂದು ಬ್ರಿಜ್‌ಭೂಷಣ್ ಶರಣ್ ಸಿಂಗ್ ಹೇಳಿದರು. ಅಂಡರ್-15 ಮತ್ತು ಅಂಡರ್-20 ಚಾಂಪಿಯನ್‌ಶಿಪ್‌ಗಳನ್ನು ಸರಿಯಾದ ಕಾರ್ಯವಿಧಾನವನ್ನು ಅನುಸರಿಸದೆ ಘೋಷಿಸಲಾಗಿದೆ ಎಂದು ಕ್ರೀಡಾ ಸಚಿವಾಲಯವು WFI ಅನ್ನು ಅಮಾನತುಗೊಳಿಸಿದೆ. ಮುಂದಿನ ಆದೇಶದವರೆಗೆ ಒಕ್ಕೂಟವನ್ನು ಅಮಾನತುಗೊಳಿಸಲಾಗಿದೆ. ಡಿಸೆಂಬರ್ 21ರ ಚುನಾವಣೆಯಲ್ಲಿ, ಬ್ರಿಜ್ ಭೂಷಣ್ ಅವರ ನಿಕಟವರ್ತಿ ಸಂಜಯ್ ಸಿಂಗ್ ಫೆಡರೇಶನ್ ಚುನಾವಣೆಯಲ್ಲಿ ಗೆದ್ದು ಮುಖ್ಯಸ್ಥರಾದರು. ನಂತರ ಸಾಕ್ಷಿ ಮಲಿಕ್ ನಿವೃತ್ತಿ ಘೋಷಿಸಿದ್ದು ವಿವಾದ ಸೃಷ್ಟಿಸಿತ್ತು. ಮರುದಿನ ಬಜರಂಗ್ ಪೂನಿಯಾ ಚುನಾವಣೆಯನ್ನು ವಿರೋಧಿಸಿ ಪದ್ಮಶ್ರೀಯನ್ನು ಹಿಂದಿರುಗಿಸಿದರು.
ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಬ್ರಿಜ್ ಭೂಷಣ್, ನನಗೆ ಬೇರೆ ಕೆಲಸಗಳಿವೆ. ಚುನಾವಣೆ ಹತ್ತಿರ ಬರುತ್ತಿದೆ. ಅದಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು. ನಾನು 12 ವರ್ಷಗಳಿಂದ ಕೆಲಸ ಮಾಡಿದ್ದೇನೆ. ನಾನು ಒಳ್ಳೆಯವನೋ ಕೆಟ್ಟವನೋ ಎಂಬುದನ್ನು ಕಾಲವೇ ಹೇಳುತ್ತದೆ. ಒಂದು ರೀತಿಯಲ್ಲಿ, ನಾನು ಕುಸ್ತಿಯಿಂದ ನಿವೃತ್ತಿ ಹೊಂದಿದ್ದೇನೆ. ಅಂದರೆ, ನಾನು ಕುಸ್ತಿಯಿಂದ ಬೇರ್ಪಟ್ಟಿದ್ದೇನೆ. ಈಗ ಏನು ಮಾಡಬೇಕೋ ಅದನ್ನು ಹೊಸದಾಗಿ ಆಯ್ಕೆಯಾದ ಜನ ಮಾಡುತ್ತಾರೆ. ಡಬ್ಲ್ಯುಎಫ್‌ಐ ಸರ್ಕಾರದೊಂದಿಗೆ ಮಾತನಾಡಬೇಕೇ ಅಥವಾ ನ್ಯಾಯಾಲಯಕ್ಕೆ ಹೋಗಬೇಕೇ, ಅದರಲ್ಲಿ ನನ್ನ ಪಾತ್ರವಿಲ್ಲ ಎಂದರು.