ಕಾಸರಗೋಡು: ರಂಗಚಿನ್ನಾರಿ (ರಿ) ಇದರ ಸಂಗೀತ ಘಟಕ ಸ್ವರಚಿನ್ನಾರಿಯು ತನ್ನ ಎರಡನೇ ಸರಣಿ ಕಾರ್ಯಕ್ರಮದ ಅಂಗವಾಗಿ 'ಕನಕ ಸ್ಮರಣೆ' ಕನಕದಾಸರ ಗೀತೆಗಳ ಸಂಗೀತ ರಸಸಂಜೆ ಕಾರ್ಯಕ್ರಮ ಕರಂದಕ್ಕಾಡ್ ಪದ್ಮಗಿರಿ ಕಲಾ ಕುಟೀರದಲ್ಲಿ ಜರುಗಿತು. ಖ್ಯಾತ ವಯಲಿನ್ ವಾದಕ ಪ್ರಭಾಕರ ಕುಂಜಾರು ಸಮಾರಂಭ ಉದ್ಘಾಟಿಸಿದರು.
ದಾಸಸಾಹಿತ್ಯ ಪ್ರತಿಪಾದಕ ಮಧ್ವಾಧೀಶ ವಿಠ್ಠಲದಾಸ ನಾಮಾಂಕಿತ ರಾಮಕೃಷ್ಣ ಕಾಟುಕುಕ್ಕೆ ಮುಕ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂದರ್ಭ ಮಾತನಾಡಿದ ಅವರು, ದಾಸ ಸಾಹಿತ್ಯ ಎಂಬುದು ಸ್ವತ: ಭಗವಂತ ಪದಗಳ ಮೇಲೆ ಕುಳಿತು ಬರೆಸಿದ ಸಾಹಿತ್ಯವಾಗಿದೆ ಎಂದು ತಿಲಿಸಿದ ಅವರು, ಕನಕದಾಸರ ಹುಟ್ಟು, ಇತಿಹಾಸ, ಮತ್ತು ಅವರು ಬರೆದ ಸಾಹಿತ್ಯಗಳ ಹಿಂದೆ ಇದ್ದ ಅವರ ಜೀವನದ ಅನುಭವಗಳು ಮತ್ತು ಅದರ ಮೇಲಿನ ಭಕ್ತಿಯ ಬಗ್ಗೆ ಬೆಲಕು ಚೆಲ್ಲಿದರು. ಹರಿದಾಸ ಸಂಕೀರ್ತನಾಕಾರ ದಯಾನಂದ ಹೊಸದುರ್ಗ ಉಪಸ್ಥಿತರಿದ್ದರು.
ಸ್ವರಚಿನ್ನಾರಿಯ ಗೌರವಾಧ್ಯಕ್ಷ, ಖ್ಯಾತ ಕವಿ ಶ್ರೀಕೃಷ್ಣಯ್ಯ ಅನಂತಪುರ ಅಧ್ಯಕ್ಷತೆ ವಹಿಸಿದ್ದರು. ಗಾಯಕಿ ಅಕ್ಷತಾ ಪ್ರಕಾಶ್ ಪ್ರಾರ್ಥನೆ ಹಾಡಿದರು. ಕಾರ್ಯದರ್ಶಿ ಕಿಶೋರ್ ಪೆರ್ಲ ಸ್ವಾಗತಿಸಿದರು. ರಂಗಚಿನ್ನಾರಿ ನಿರ್ದೇಶಕರು ಕಾಸರಗೋಡು ಚಿನ್ನಾ ಅವರು ಪ್ರಾಸ್ತವಿಕ ಮಾತುಗಳನ್ನಾಡಿ ಕಾರ್ಯಕ್ರಮ ನಿರೂಪಿಸಿದರು. ಜತೆ ಕಾರ್ಯದರ್ಶಿ ಪ್ರತಿಜ್ಞಾ ರಂಜಿತ್ ವಂದಿಸಿದರು.
ಕಾರ್ಯಕ್ರಮದ ಅಂಗವಾಗಿ ಕನಕದಾಸರ ಗೀತೆಗಳ ಸಂಗೀತ ರಸಮಂಜರಿ ನಡೆಯಿತು. ಸ್ವರಚಿನ್ನಾರಿಯ ಆಶಯಗೀತೆಯೊಂದಿಗೆ ಸಂಗೀತ ಕಾರ್ಯಕ್ರಮವನ್ನು ಗಾಯಕರು ನಡೆಸಿಕೊಟ್ಟರು. ವಿಜಯಲಕ್ಷ್ಮಿ ಶಾನುಭೋಗ್ ಇವರನ್ನು ವೇದಿಕೆಯಲ್ಲಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕನಕದಾಸರ ಸುಮಾರು 12 ಹಾಡುಗಳನ್ನು ಗಾಯಕರಾದ ಕಿಶೋರ್ ಪೆರ್ಲ, ಗಣೇಶ್ ಪ್ರಸಾದ್ ನಾಯಕ್, ರತ್ನಾಕರ್ ಎಸ್. ಓಡಂಗಲ್ಲು, ಪ್ರತಿಜ್ಞಾ ರಂಜಿತ್, ಅಕ್ಷತಾ ಪ್ರಕಾಶ್, ಬಬಿತಾ ಆಚಾರ್ಯ, ಜಯಶ್ರೀ ಅನಂತಪುರ ಹಾಡಿದರು. ಹಿಮ್ಮೇಳದಲ್ಲಿ ಕೀಬೋರ್ಡ್ ವಾದಕರಾಗಿ ಪುರುಷೋತ್ತಮ್ ಕೊಪ್ಪಲ್, ಸತ್ಯನಾರಾಯಣ ಐಲ ಹಾರ್ಮೋನಿಯಂ, ರಿದಂ ಪ್ಯಾಡ್‍ನಲ್ಲಿ ಪ್ರಭಾಕರ್ ಮಲ್ಲ ಮತ್ತು ತಬಲಾದಲ್ಲಿ ಲವಕುಮಾರ್ ಐಲ ಸಹಕರಿಸಿದರು. ಗಣೇಶ್ ಪ್ರಸಾದ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.