ವಾಷಿಂಗ್ಟನ್ ಡಿಸಿ: ಮುಂಬರುವ ಅಯೋಧ್ಯೆಯ ರಾಮಮಂದಿರದ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮವನ್ನು ಸಂಭ್ರಮಿಸಲು ಅಮೆರಿಕದ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಹಿಂದೂ ಅಮೆರಿಕನ್ನರು ಮೇರಿಲ್ಯಾಂಡ್‌ನ ಆಂಜನೇಯ ದೇವಸ್ಥಾನದಲ್ಲಿ ಮಿನಿ ಕಾರು ಮತ್ತು ಬೈಕ್ ರ್‍ಯಾಲಿಯನ್ನು ಆಯೋಜಿಸಿದ್ದರು.
'ಅಯೋಧ್ಯಾ ವೇ' ಎಂಬ ಹೆಸರಿನ ರಸ್ತೆಯಲ್ಲಿ ಈ ರ್‍ಯಾಲಿ ನಡೆದಿದೆ.
ರಾಮಮಂದಿರ ಉದ್ಘಾಟನೆ ಸಂದರ್ಭದಲ್ಲಿ ವಾಷಿಂಗ್ಟನ್‌ನಲ್ಲಿ ಐತಿಹಾಸಿಕ ಸಮಾರಂಭವನ್ನು ಆಯೋಜಿಸುತ್ತಿದ್ದೇವೆ ಎಂದು ಕಾರ್ಯಕ್ರಮದ ಆಯೋಜಕರಲ್ಲಿ ಒಬ್ಬರಾದ ವಾಷಿಂಗ್ಟನ್‌ನ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಮಹೇಂದ್ರ ಸಾಪಾ ಹೇಳಿದ್ದಾರೆ.
'ಹಿಂದೂಗಳ 500 ವರ್ಷಗಳ ಹೋರಾಟದ ನಂತರ, ಭಗವಾನ್ ಶ್ರೀರಾಮ ಮಂದಿರವನ್ನು ಉದ್ಘಾಟಿಸಲಾಗುತ್ತಿದೆ. ಆದ್ದರಿಂದ ನಾವು ಜನವರಿ 20, 2024ರಂದು ವಾಷಿಂಗ್ಟನ್ ಡಿಸಿ ಪ್ರದೇಶದಲ್ಲಿ ಸುಮಾರು 1000 ಅಮೆರಿಕನ್ ಹಿಂದೂ ಕುಟುಂಬಗಳೊಂದಿಗೆ ಐತಿಹಾಸಿಕ ಆಚರಣೆಯನ್ನು ಆಯೋಜಿಸುತ್ತಿದ್ದೇವೆ. ಈ ಆಚರಣೆಯಲ್ಲಿ ರಾಮ ಲೀಲಾ, ಶ್ರೀರಾಮನ ಕಥೆಗಳು, ಶ್ರೀರಾಮನ ಪ್ರಾರ್ಥನೆ ಮತ್ತು ಭಜನೆ ಇರುತ್ತದೆ'ಎಂದು ಅವರು ಹೇಳಿದರು.
ಅಮೆರಿಕದ ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ವಿವಿಧ ವಯೋಮಾನದ ಮಕ್ಕಳು ಭಗವಾನ್ ರಾಮನ ಜೀವನ ಕಥೆಯನ್ನು 45 ನಿಮಿಷಗಳ ಕಾಲ ನಟಿಸಿ ತೋರಿಸಲಿದ್ದಾರೆ ಎಂದು ಮತ್ತೊಬ್ಬ ಸಹ-ಸಂಘಟಕ ಅನಿಮೇಶ್ ಶುಕ್ಲಾ ಹೇಳಿದರು.
ಸಹ ಸಂಘಟಕ ಮತ್ತು ಸ್ಥಳೀಯ ತಮಿಳು ಹಿಂದೂ ಮುಖಂಡ ಪ್ರೇಮಕುಮಾರ್ ಸ್ವಾಮಿನಾಥನ್ ಅವರು ತಮಿಳಿನಲ್ಲಿ ರಾಮನನ್ನು ಸ್ತುತಿಸುವ ಹಾಡನ್ನು ಹಾಡಿದರು.