ನವದೆಹಲಿ: ತಮ್ಮನ್ನು ಲೋಕಸಭೆಯಿಂದ ಉಚ್ಚಾಟನೆ ಮಾಡಿರುವ ಕೇಂದ್ರ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ಅವರು ಇಂದು (ಸೋಮವಾರ) ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಉದ್ಯಮಿಯೊಬ್ಬರ ಹಿತಾಸಕ್ತಿಯ ರಕ್ಷಣೆಗಾಗಿ ಮಹುವಾ ಮೊಯಿತ್ರಾ ಅವರು, ಆ ಉದ್ಯಮಿಯಿಂದ ಅಕ್ರಮವಾಗಿ ಪ್ರಯೋಜನ ಪಡೆದುಕೊಂಡಿದ್ದಾರೆ ಎಂದು ಹೇಳಿರುವ ನೀತಿ ಸಮಿತಿಯ ವರದಿಯನ್ನು ಅಂಗೀಕರಿಸಿರುವ ಲೋಕಸಭೆಯು, ಮಹುವಾ ಅವರನ್ನು ಲೋಕಸಭಾ ಸದಸ್ಯತ್ವದಿಂದ ಶುಕ್ರವಾರ ಉಚ್ಚಾಟಿಸಿತ್ತು.
ನೀತಿ ಸಮಿತಿಯ ವರದಿ ಬಗ್ಗೆ ಲೋಕಸಭೆಯಲ್ಲಿ ಬಿರುಸಿನ ಚರ್ಚೆ ನಡೆದಿತ್ತು. ಆದರೆ ಈ ವೇಳೆ ಮಹುವಾ ಅವರಿಗೆ ಮಾತನಾಡಲು ಅವಕಾಶ ಕೊಡಲಿಲ್ಲ. ಮಹುವಾ ಅವರು 'ಅನೈತಿಕವಾಗಿ ನಡೆದುಕೊಂಡಿದ್ದಾರೆ' ಎಂಬ ಕಾರಣಕ್ಕೆ ಅವರನ್ನು ಉಚ್ಚಾಟಿಸಬೇಕು ಎಂಬ ಗೊತ್ತುವಳಿಯನ್ನು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಮಂಡಿಸಿದ್ದರು. ಈ ಗೊತ್ತುವಳಿಯನ್ನು ಸದನವು ಧ್ವನಿಮತದ ಮೂಲಕ ಅಂಗೀಕರಿಸಿತ್ತು.
ತಮ್ಮನ್ನು ಉಚ್ಚಾಟಿಸಿರುವುದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ ಮಹುವಾ, ಈ ಕ್ರಮವು 'ಕಾಂಗರೂ ನ್ಯಾಯಾಲಯವೊಂದು (ಕೆಲವು ವ್ಯಕ್ತಿಗಳ ಗುಂಪು ನಿಯಮಾವಳಿಯನ್ನು ಗಾಳಿಗೆ ತೂರಿ, ಸಾಕ್ಷ್ಯದ ಆಧಾರವಿಲ್ಲದೆ ನೀಡುವ ತೀರ್ಮಾನ) ನೇಣು ಶಿಕ್ಷೆ ವಿಧಿಸಿದಂತೆ ಇದೆ' ಎಂದು ಹೇಳಿದರು. ವಿರೋಧ ಪಕ್ಷಗಳು ತಾನು ಹೇಳಿದಂತೆ ಕೇಳುವಂತಾಗಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರವು ಸಂಸದೀಯ ಸಮಿತಿಯೊಂದನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದೆ ಎಂದು ದೂರಿದ್ದರು.
ಅಸ್ತಿತ್ವದಲ್ಲಿಯೇ ಇಲ್ಲದ ನೀತಿ ಸಂಹಿತೆಯನ್ನು ಉಲ್ಲಂಘಿ ಸಲಾಗಿದೆ ಎಂದು ತಮ್ಮನ್ನು ಉಚ್ಚಾಟಿಸಲಾಗಿದೆ ಎಂದು ಮಹುವಾ ಅವರು ಸುದ್ದಿಗಾರರ ಬಳಿ ದೂರಿದರು. ತಾವು ಹಣ ಪಡೆದುಕೊಂಡಿದ್ದಕ್ಕಾಗಲೀ, ಉಡುಗೊರೆ ಸ್ವೀಕರಿಸಿದ್ದಕ್ಕಾಗಲೀ ಸಾಕ್ಷ್ಯ ಇಲ್ಲ ಎಂದು ಹೇಳಿದ್ದರು.