ನವದೆಹಲಿ: 'ಅಸಾಧಾರಣ ಸಂದರ್ಭಗಳಲ್ಲಿ ವಿಚಾರಣೆಯನ್ನು ಸ್ಥಳಾಂತರಿಸಿದ ರಾಜ್ಯಕ್ಕೆ ಬದಲಾಗಿ ಅಪರಾಧ ನಡೆದ ರಾಜ್ಯದಿಂದ ಕ್ಷಮಾಧಾನ ಅರ್ಜಿಯನ್ನು ನಿರ್ಧರಿಸಬಹುದು. ಬಿಲ್ಕಿಸ್ ಬಾನೊ ಪ್ರಕರಣದಲ್ಲಿ ಅಪರಾಧಿಗಳ ಕ್ಷಮಾಧಾನದಲ್ಲಿ ಕಾನೂನು ಸಮಸ್ಯೆ ಇತ್ಯರ್ಥಪಡಿಸಲಾಗಿದೆ' ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ನವದೆಹಲಿ: 'ಅಸಾಧಾರಣ ಸಂದರ್ಭಗಳಲ್ಲಿ ವಿಚಾರಣೆಯನ್ನು ಸ್ಥಳಾಂತರಿಸಿದ ರಾಜ್ಯಕ್ಕೆ ಬದಲಾಗಿ ಅಪರಾಧ ನಡೆದ ರಾಜ್ಯದಿಂದ ಕ್ಷಮಾಧಾನ ಅರ್ಜಿಯನ್ನು ನಿರ್ಧರಿಸಬಹುದು. ಬಿಲ್ಕಿಸ್ ಬಾನೊ ಪ್ರಕರಣದಲ್ಲಿ ಅಪರಾಧಿಗಳ ಕ್ಷಮಾಧಾನದಲ್ಲಿ ಕಾನೂನು ಸಮಸ್ಯೆ ಇತ್ಯರ್ಥಪಡಿಸಲಾಗಿದೆ' ಎಂದು ಸುಪ್ರೀಂ ಕೋರ್ಟ್ ಹೇಳಿದೆ.
2003ರಲ್ಲಿ ನಡೆದ ಕವಯಿತ್ರಿ ಮಧುಮಿತಾ ಶುಕ್ಲಾ ಕೊಲೆ ಪ್ರಕರಣದ ಅಪರಾಧಿಯೊಬ್ಬರು ಸಲ್ಲಿಸಿದ್ದ ಮನವಿಯನ್ನು ಪರಿಗಣಿಸಿದ ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಅಗಸ್ಟಿನ್ ಜಾರ್ಜ್ ಮಸಿಹ್ ಅವರಿದ್ದ ಪೀಠವು 'ರಾಧೇಶ್ಯಾಮ್ ಭಗವಾನದಾಸ್ ಶಾ ಅಲಿಯಾಸ್ ಲಾಲಾ ವಕೀಲ್ ವರ್ಸಸ್ ಗುಜರಾತ್ ಮತ್ತು ಇನ್ನೊಂದು ರಾಜ್ಯ' (2022) ಪ್ರಕರಣದಲ್ಲಿ ಸಮನ್ವಯ ಪೀಠ ನೀಡಿದ ತೀರ್ಪು ಉಲ್ಲೇಖಿಸಿದೆ.
ಅರ್ಜಿದಾರ ರೋಹಿತ್ ಚತುರ್ವೇದಿ ಅವರು ಉತ್ತರಾಖಂಡ ಸರ್ಕಾರವು ತಮ್ಮ ಕ್ಷಮಾಧಾನ ಅರ್ಜಿ ತಿರಸ್ಕರಿಸಿದ್ದರಿಂದ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಅರ್ಜಿಯನ್ನು ಉತ್ತರಾಖಂಡ ಸರ್ಕಾರಕ್ಕೆ ವರ್ಗಾಯಿಸಿದ್ದರಿಂದ ಕೇಂದ್ರ ಸರ್ಕಾರದ ಮುಂದೆ ಅರ್ಜಿದಾರರು ಕ್ಷಮಾಧಾನದ ಅರ್ಜಿ ಸಲ್ಲಿಸಿ, ಉತ್ತರ ಪ್ರದೇಶದಲ್ಲಿ ಅಪರಾಧ ನಡೆದಿರುವುದರಿಂದ ಕ್ಷಮಾಧಾನ ಅರ್ಜಿಯನ್ನು ಆ ರಾಜ್ಯವೇ ಪರಿಗಣಿಸುವುದು ಸರಿಯಾದ ಕ್ರಮ ಎಂದು ಪ್ರತಿಪಾದಿಸಿದ್ದರು.
ಉತ್ತರ ಪ್ರದೇಶದ ಮಾಜಿ ಸಚಿವ ಅಮರಮಣಿ ತ್ರಿಪಾಠಿ ಅವರು ಭಾಗಿಯಾದ 2003ರಲ್ಲಿನ ಮಧುಮಿತಾ ಶುಕ್ಲಾ ಕೊಲೆ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಲಖನೌದಿಂದ ಡೆಹ್ರಾಡೂನ್‌ಗೆ ವರ್ಗಾಯಿಸಿತ್ತು. ವಿಚಾರಣಾ ನ್ಯಾಯಾಲಯ ಆರೋಪಿಗಳನ್ನು ತಪ್ಪಿತಸ್ಥರೆಂದು ಘೋಷಿಸಿತ್ತು. ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಶಿಕ್ಷೆಯನ್ನು ಎತ್ತಿ ಹಿಡಿದಿವೆ.
'ಉತ್ತರಾಖಂಡ ರಾಜ್ಯವು ನಡೆಸಿದ ಸಂಪೂರ್ಣ ಪ್ರಕ್ರಿಯೆಯು ನ್ಯಾಯವ್ಯಾಪ್ತಿಯಲ್ಲಿ ಇಲ್ಲದಂತಿದೆ. ಹಾಗಾಗಿ, ಇದು ಕಾನೂನಿನಡಿಯೂ ಸಮರ್ಥನೀಯವಲ್ಲ' ಎಂದ ಪೀಠವು, ಅರ್ಜಿದಾರರ ಮನವಿಯನ್ನು ಪುರಸ್ಕರಿಸಿತು.
ಮೂರು ವಾರಗಳಲ್ಲಿ ಉತ್ತರ ಪ್ರದೇಶ ಸರ್ಕಾರಕ್ಕೆ ಕಡತ ಕಳುಹಿಸುವಂತೆ ಉತ್ತರಾಖಂಡ ಸರ್ಕಾರಕ್ಕೆ ಪೀಠವು ಸೂಚಿಸಿದೆ. ಅಲ್ಲದೆ, ಉತ್ತರಾಖಂಡ ಸರ್ಕಾರದ ನಿರ್ಧಾರದಿಂದ ಪ್ರಭಾವಿತವಾಗದೆ ಎಂಟು ವಾರಗಳೊಳಗೆ ನಿರ್ಧಾರ ತೆಗೆದುಕೊಳ್ಳುವಂತೆಯೂ ಉತ್ತರ ಪ್ರದೇಶ ಸರ್ಕಾರಕ್ಕೆ ಆದೇಶ ನೀಡಿದೆ.