ನವದೆಹಲಿ: ಸಂಸದ ಧೀರಜ್ ಪ್ರಸಾದ್ ಸಾಹು ಅವರಿಗೆ ಸೇರಿದ ವಿವಿಧ ಸ್ಥಳಗಳಲ್ಲಿ ದಾಖಲೆ ಇಲ್ಲದ ₹350 ಕೋಟಿಗೂ ಅಧಿಕ ಹಣ ಜಪ್ತಿ ಮಾಡಿರುವ ಪ್ರಕರಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಜನಪ್ರಿಯ ವೆಬ್ ಸರಣಿ 'ಮನಿ ಹೈಸ್ಟ್' ಜತೆ ಉಲ್ಲೇಖಿಸಿ, ಕಾಂಗ್ರೆಸ್ ಪಕ್ಷವನ್ನು ಲೇವಡಿ ಮಾಡಿದ್ದಾರೆ.

ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಸಾಹು ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ಮುಖಂಡರ ಜತೆಗಿರುವ ಚಿತ್ರ ಹಾಗೂ ಅಧಿಕಾರಿಗಳು ಜಪ್ತಿ ಮಾಡಿರುವ ಹಣದ ಚಿತ್ರವನ್ನು ಬಿಜೆಪಿ ತನ್ನ 'ಎಕ್ಸ್' ಖಾತೆಯಲ್ಲಿ ಪೋಸ್ಟ್ ಮಾಡಿತ್ತು. 'ಕಾಂಗ್ರೆಸ್ ಪ್ರಸ್ತುತಪಡಿಸುತ್ತಿರುವ ಮನಿ ಹೈಸ್ಟ್' ಎಂಬ ಬರಹವನ್ನೂ ನೀಡಿತ್ತು.
'ಕಳೆದ 70 ವರ್ಷಗಳಿಂದಲೂ ಹಣ ದರೋಡೆ ಮಾಡಿದ ಇತಿಹಾಸ ಹೊಂದಿರುವ ಕಾಂಗ್ರೆಸ್‌ನಂತಹ ಒಂದು ಪಕ್ಷ ಇರುವಾಗ ಭಾರತದಲ್ಲಿ ಮನಿ ಹೈಸ್ಟ್ ವೆಬ್ ಸರಣಿಯ ಕಥೆ ಯಾರಿಗೆ ಬೇಕು?' ಎಂದು ಮೋದಿ ವ್ಯಂಗ್ಯವಾಡಿದ್ದಾರೆ.
ಪ್ರಧಾನಿ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು
ಪ್ರಧಾನಿ ಹೇಳಿಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್, ಅದಾನಿ ಸಮೂಹದ 'ಅಭೂತಪೂರ್ವ ಬೆಳವಣಿಗೆ'ಗೆ ಯಾರು ಕಾರಣರು ಎಂದು ಪ್ರಶ್ನಿಸಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, 'ಒಂದು ಕಾಲದಲ್ಲಿ ಏನೂ ಇಲ್ಲದ ಅವರು (ಗೌತಮ್ ಅದಾನಿ) ವಿಶ್ವದ ಎರಡನೇ ಅತಿದೊಡ್ಡ ಶ್ರೀಮಂತ ವ್ಯಕ್ತಿಯಾಗಿ ಬೆಳೆದಿದ್ದಾರೆ. ಹಿಂದೆಂದೂ ಕಾಣದ ಈ ಬೆಳವಣಿಗೆಗೆ ಯಾರು ಕಾರಣರು? ಮೋದಿ ಅವರೇ, 1947ರ ಬಳಿಕ ನಡೆದಿರುವ ಅತಿದೊಡ್ಡ ಮನಿ ಹೈಸ್ಟ್ ಪ್ರಕರಣದ (ಅದಾನಿ ವಿಚಾರ) ಬಗ್ಗೆ ದೇಶದ ಜನರು ನಿಮ್ಮಿಂದ ವಿವರಣೆಯನ್ನು ಬಯಸುತ್ತಾರೆ' ಎಂದಿದ್ದಾರೆ.
ಜಾರಿ ನಿರ್ದೇಶನಾಲಯ, ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆಯನ್ನು ಬಳಸಿಕೊಂಡು 'ಉಡುಗೊರೆಯಾಗಿ' ನೀಡಿರುವ ಯೋಜನೆಗಳಲ್ಲಿ ಅದಾನಿ ಹೂಡಿಕೆ ಮಾಡಿದ್ದಾರೆ ಎಂದು ಅವರು 'ಎಕ್ಸ್' ಖಾತೆಯಲ್ಲಿ ಆರೋಪಿಸಿದ್ದಾರೆ.