ನವದೆಹಲಿ: ಸಂಸತ್ ಭದ್ರತಾ ಲೋಪ ಪ್ರಕರಣದಲ್ಲಿ ಬಂಧಿತರಾಗಿರುವ ಆರು ಆರೋಪಿಗಳನ್ನು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಲು ಅವಕಾಶ ನೀಡಬೇಕು ಎಂದು ಕೋರಿ ದೆಹಲಿ ಪೊಲೀಸರು ಗುರುವಾರ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗಿದ್ದು, ಕೆಲ ಆರೋಪಿಗಳ ಪರ ವಕೀಲರು ಗೈರು ಹಾಜರಾಗಿದ್ದರಿಂದ ನ್ಯಾಯಾಧೀಶ ಹರ್ದೀಪ್ ಕೌರ್ ಅವರು ಜ.2ಕ್ಕೆ ವಿಚಾರಣೆಯನ್ನು ನಿಗದಿಪಡಿಸಿದ್ದಾರೆ.
ಆರೋಪಿಗಳಾದ ಮನೋರಂಜನ್ ಡಿ, ಸಾಗರ್ ಶರ್ಮಾ, ಅಮೋಲ್ ಧನರಾಜ್ ಶಿಂದೆ, ನೀಲಂ ದೇವಿ, ಲಲಿತ್ ಝಾ ಹಾಗೂ ಮಹೇಶ್ ಕುಮಾವತ್ ಸದ್ಯ ಪೊಲೀಸ್ ವಶದಲ್ಲಿದ್ದು, ನ್ಯಾಯಾಲಯದ ಎದುರು ಆರೋಪಿಗಳನ್ನು ಪೊಲೀಸರು ಹಾಜರು ಪಡಿಸಿದರು.
ಪಬ್ಲಿಕ್ ಪ್ರಾಸಿಕ್ಯೂಟರ್ ಅಖಂಡ್ ಪ್ರತಾಪ್ ಸಿಂಗ್ ಅವರು ದೆಹಲಿ ಪೊಲೀಸರನ್ನು ಪ್ರತಿನಿಧಿಸಿದರು.
ದಾಳಿಯ ಹಿಂದಿನ ನಿಜವಾದ ಉದ್ದೇಶ ತಿಳಿಯಲು ಹಾಗೂ ಅವರು ಯಾವುದೇ ಶತ್ರು ದೇಶ ಅಥವಾ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಬಂಧವನ್ನು ಹೊಂದಿರುವುದರ ಬಗ್ಗೆ ತಿಳಿದುಕೊಳ್ಳಲು ಆರೋಪಿಗಳ ಕಸ್ಟಡಿ ವಿಚಾರಣೆಯ ಅಗತ್ಯವಿದೆ ಎಂದು ಪೊಲೀಸರು ನ್ಯಾಯಾಲಯದ ಮುಂದೆ ಹೇಳಿದ್ದಾರೆ.