ಕೊಟ್ಟಾಯಂ: ಶಬರಿಮಲೆ ಯಾತ್ರೆಯ ಸೀಸನ್ ಆರಂಭವಾಗಿದ್ದು, ನಿತ್ಯವು ಸಾವಿರಾರು ಭಕ್ತರು ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಆಗಮಿಸುತ್ತಿದ್ದಾರೆ. ಇದರಿಂದ ದೇಗುಲದಲ್ಲಿ ಸಾಕಷ್ಟು ನೂಕು ನುಗ್ಗುಲ ಉಂಟಾಗಿದ್ದು, ಭಕ್ತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಅಲ್ಲದೆ, ಶಬರಿಮಲೆ ದರ್ಶನಕ್ಕೆ ಸರ್ಕಾರ ಸರಿಯಾದ ವ್ಯವಸ್ಥೆ ಮಾಡಿಲ್ಲ ಎಂಬ ಆರೋಪವು ಕೇಳಿಬಂದಿದೆ.
ಆರೋಪದ ಬೆನ್ನಲ್ಲೇ ಕೇರಳದ ಯುನೈಟೆಡ್ ಡೆಮೊಕ್ರೆಟಿಕ್ ಫ್ರಂಟ್ (ಯುಡಿಎಫ್) ತನ್ನನಿಯೋಗವೊಂದನ್ನು ಶಬರಿಮಲೆಗೆ ಕಳುಹಿಸಿದ್ದು, ನೀಲಕಲ್ ಮತ್ತು ಪಂಬಾಗೆ ಭೇಟಿ ನೀಡಿ ವಸ್ತುಸ್ಥಿತಿಯನ್ನು ಅವಲೋಕಿಸಿ, ಭಕ್ತರ ಪರಿಸ್ಥಿತಿ ಅತ್ಯಂತ ಕರುಣಾಜನಕ ಎಂದು ಹೇಳಿದೆ. ಅಂದಹಾಗೆ ಯುಡಿಎಫ್, ಕೇರಳದ ಬಲಪಂಥೀಯ ರಾಜಕೀಯ ಪಕ್ಷಗಳಿಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನೇತೃತ್ವದ ಒಕ್ಕೂಟವಾಗಿದೆ.
ಯುಡಿಎಫ್ ತಂಡದ ನೇತೃತ್ವ ವಹಿಸಿರುವ ತಿರುವಂಚೂರಿನ ಶಾಸಕ ರಾಧಾಕೃಷ್ಣ ಮಾತನಾಡಿ, ಶಬರಿಮಲೆಯಲ್ಲಿ ಮೂಲ ಸೌಕರ್ಯ ಕಲ್ಪಿಸುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಮತ್ತು ಪರಿಸ್ಥಿತಿಯನ್ನು ಸುಧಾರಿಸುವಲ್ಲಿ ಸರ್ಕಾರದ ಯಾವುದೇ ಪ್ರಯತ್ನಗಳು ಕಾಣುತ್ತಿಲ್ಲ ಎಂದು ಹೇಳಿದ್ದಾರೆ.
ಪಂಬಾದಲ್ಲಿ ಭಕ್ತರು 8 ರಿಂದ 9 ಗಂಟೆಗಳವರೆಗೆ ಆಹಾರ ಮತ್ತು ಕುಡಿಯುವ ನೀರು ಇಲ್ಲದೆ ಕ್ಯೂನಲ್ಲಿ ನಿಲ್ಲಬೇಕಾದ ಸ್ಥಿತಿ ಇದೆ. ಈ ಪ್ರಮಾಣದ ನೂಕು ನುಗ್ಗಲನ್ನು ಕೃತಕವಾಗಿ ಸೃಷ್ಟಿಸಲಾಗಿದೆ. ಪಂಬಾದಲ್ಲಿ ಏಕಕಾಲಕ್ಕೆ 15,000 ಯಾತ್ರಾರ್ಥಿಗಳಿಗೆ ಸ್ಥಳಾವಕಾಶ ಕಲ್ಪಿಸುವ ವಿರಿಪಂಥಾಲ್ ಇತ್ತು. ಆದರೆ, 2018ರ ಪ್ರವಾಹದ ವೇಳೆ ಈ ಮೂಲ ಸೌಕರ್ಯ ಸಂಪೂರ್ಣ ಕೊಚ್ಚಿ ಹೋಗಿದೆ. ಕೇವಲ ಎರಡು ವಿಶ್ರಾಂತಿ ತಾಣಗಳು ಮಾತ್ರ ಈಗ ಉಳಿದಿವೆ ಎಂದು ಶಾಸಕ ರಾಧಾಕೃಷ್ಣ ಹೇಳಿದ್ದಾರೆ.
ಇದೇ ತಂಡ ನೀಲಕಲ್ಗೂ ಭೇಟಿ ನೀಡಿದ್ದು, ಸುಮಾರು 100 ರಿಂದ 150 ಯಾತ್ರಾರ್ಥಿಗಳನ್ನು ದನ ಕೊಟ್ಟಿಗೆಗೆ ದನಗಳನ್ನು ತುಂಬಿದಂತೆ ಬಸ್‌ಗಳಲ್ಲಿ ತುಂಬಿದ್ದರು. ಅಲ್ಲದೆ, ಹವಾನಿಯಂತ್ರಣಗಳ ವ್ಯವಸ್ಥೆಯು ಸಹ ಇರಲಿಲ್ಲ ಎಂದಿದ್ದಾರೆ. ನಂತರ ರಾಧಾಕೃಷ್ಣ ನೇತೃತ್ವದ ಸಮಿತಿಯು ಪಂಬಾದಲ್ಲಿ ಸಭೆ ನಡೆಸಿ, ಯುಡಿಎಫ್ ರಾಜ್ಯ ಸಮಿತಿಗೆ ಸಲ್ಲಿಸಬೇಕಾದ ವರದಿಯನ್ನು ಚರ್ಚಿಸಿತು. ಮೂಲ ಸೌಕರ್ಯಗಳ ಕೊರತೆಯಿಂದ ಭಕ್ತರು ಎದುರಿಸುತ್ತಿರುವ ತೀವ್ರ ಮಾನವ ಹಕ್ಕುಗಳ ಉಲ್ಲಂಘನೆಗಾಗಿ ಕಾನೂನು ಕ್ರಮಕ್ಕೆ ಶಿಫಾರಸು ಮಾಡಲು ತಂಡವು ನಿರ್ಧರಿಸಿದೆ ಎಂದು ರಾಧಾಕೃಷ್ಣನ್ ಹೇಳಿದರು.
ಇನ್ನೂ ಅಗತ್ಯ ವ್ಯವಸ್ಥೆ ಮಾಡದ ಸರ್ಕಾರದ ವಿರುದ್ಧ ಕೇರಳ ಹೈಕೋರ್ಟ್ ಸಹ ಖಡಕ್ ಎಚ್ಚರಿಕೆ ನೀಡಿದೆ. ಆದಷ್ಟು ಬೇಗ ಸಮಸ್ಯೆ ಪರಿಹರಿಸಲು ಸರ್ಕಾರಿ ಸೂಚನೆ ನೀಡಿದೆ.