ಉಡುಪಿ: ಕೇರಳದ ಪ್ಲಾಂಟೇಷನ್ ಕಾರ್ಪೋರೇಷನ್‌ನ ಗೋದಾಮುಗಳಲ್ಲಿ ಉಳಿದಿದ್ದ ಅತ್ಯಂತ ವಿಷಕಾರಕ ಕೀಟ ನಾಶಕ ಎಂಡೋಸಲ್ಫಾನ್‌ನ್ನು ಅಕ್ರಮವಾಗಿ ಹಾಗೂ ಅವೈಜ್ಞಾನಿಕವಾಗಿ ಕರ್ನಾಟಕದ ಗಡಿಭಾಗವಾದ ಕೇರಳದ ಮಿಂಚಿನಪದವು ಗುಡ್ಡಗಾಡು ಪ್ರದೇಶದ ಪಾಳು ಬಾವಿಯಲ್ಲಿ ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ದಕ್ಷಿಣದ ಚೆನ್ನೈ ಪೀಠವು ಇದೀಗ ಕೇಂದ್ರ ಸರಕಾರ, ಕರ್ನಾಟಕ ಮತ್ತು ಕೇರಳ ಸರಕಾರ ಅಲ್ಲದೇ ಕರ್ನಾಟಕ ಮತ್ತು ಕೇರಳದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳು ಹಾಗೂ ಇತರರಿಗೆ ನೋಟೀಸು ಜಾರಿ ಮಾಡಿದೆ ಎಂದು ಈ ಬಗ್ಗೆ ದಶಕಗಳಿಂದ ಹೋರಾಟ ನಡೆಸುತ್ತಿರುವ ಉಡುಪಿಯ ಮಾವನ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರನಾಥ್ ಶ್ಯಾನುಭಾಗ್ ತಿಳಿಸಿದ್ದಾರೆ.
ಉಡುಪಿಯಲ್ಲಿಂ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ.ಶ್ಯಾನುಭಾಗ್, ಈ ಕುರಿತು ತಾನು ಹಸಿರು ಪೀಠದ ಮುಂದೆ ಸಲ್ಲಿಸಿದ ದೂರು ಅರ್ಜಿಯನ್ನು ಸ್ವೀಕರಿಸಿದ ನ್ಯಾಯ ಮಂಡಳಿ, 2013ರಲ್ಲಿ ಅಕ್ರಮವಾಗಿ ಹೂಳಲಾಗಿದೆ ಎನ್ನಲಾಗಿರುವ ಸುಮಾರು 600ಲೀ. ಎಂಡೋಸೆಲ್ಫಾನ್ ತೆರವಿಗೆ ಕೈಗೊಂಡ ಕ್ರಮಗಳ ಕುರಿತು ವರದಿ ಸಲ್ಲಿಸುವಂತೆ ಕೇಂದ್ರ ಸರಕಾರದ ಪರಿಸರ ಇಲಾಖೆಗೆ ಹಾಗೂ ಕರ್ನಾಟಕ ಮತ್ತು ಕೇರಳಗಳ ಮಾಲಿನ್ಯ ನಿಯಂತ್ರಣ ಮಂಡಳಿಗೆ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದೆ ಎಂದು ಅವರು ತಿಳಿಸಿದರು.
ಪರಿಸರ ಸಂರಕ್ಷಣೆಯ ಈ ಹೋರಾಟದಲ್ಲಿ ಪ್ರತಿಷ್ಠಾನದೊಂದಿಗೆ ಕೈಜೋಡಿಸಿರುವ ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾಯ ವಾದಿ ಗೌರವ್ ಕುಮಾರ್ ಬನ್ಸಾಲ್ ಅವರು ಮಾತನಾಡಿ, ಎನ್‌ಜಿಟಿ ಡಿ.20ರಂದು ಈ ಆದೇಶ ನೀಡಿದ್ದು, ಇದಕ್ಕಾಗಿ 10 ದಿನಗಳ ಕಾಲಾವಕಾಶವನ್ನು ನೀಡಿದೆ. ನ್ಯಾಯಾಲಯ, ರಜೆಯ ಬಳಿಕ ಜ.2ರಿಂದ ಪುನರಾರಂಭಗೊಂಡಾಗ ಮತ್ತೆ ವಿಷಯ ವಿಚಾರಣೆಗೆ ಬರಲಿದೆ ಎಂದರು.
ತನಗೆ ಸಿಕ್ಕಿರುವ ಮಾಹಿತಿಯಂತೆ ಕೇಂದ್ರ ಪರಿಸರ ಇಲಾಖೆಯ ಹಿರಿಯ ಅಧಿಕಾರಿಗಳು, ವಿಜ್ಞಾನಿಗಳು ಹಾಗೂ ಕರ್ನಾಟಕ ಮತ್ತು ಕೇರಳದ ಪರಿಸರ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳೊಂದಿಗೆ ಡಿ.28ರಂದುಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವ ಸಾಧ್ಯತೆ ಇದೆ ಎಂದು ಗೌರವ್ ಬನ್ಸಾಲ್ ತಿಳಿಸಿದರು.
ಪ್ರಕರಣದ ಹಿನ್ನೆಲೆ: 1980ರಿಂದ ಸುಮಾರು ಎರಡು ದಶಕಗಳ ಕಾಲ ಕರ್ನಾಟಕ ಮತ್ತು ಕೇರಳದ ಸರಕಾರಿ ಪ್ರಾಯೋಜಿಕ ಪ್ಲಾಂಟೇಷನ್ ಕಾರ್ಪೋರೇಷನ್, ಕರ್ನಾಟಕ ಮತ್ತು ಕೇರಳದ ಗೇರು ತೋಟಗಳಲ್ಲಿ ಹೆಲಿಕಾಫ್ಟರ್ ಮೂಲಕ ಎಂಡೋಸಲ್ಫಾನ್ ಎಂಬ ಅತ್ಯಂತ ವಿಷಕಾರಕ ಕೀಟ ನಾಶಕಗಳನ್ನು ಸಿಂಪಡಿಸಿದ್ದು, ಇದರಿಂದ ಕರ್ನಾಟಕದ (ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ) 8,600 ಹಾಗೂ ಕೇರಳದ 3,400 ಮಕ್ಕಳು ಹುಟ್ಟುವಾಗಲೇ ಅಂಗವಿಕಲರಾಗಿದ್ದರು. ಅಲ್ಲದೇ ಎರಡೂ ರಾಜ್ಯಗಳ ಸಾವಿರಾರು ಮಂದಿ ಇದರ ಘೋರ ಪರಿಣಾಮಗಳನ್ನು ವಿವಿಧ ರೀತಿಯಲ್ಲಿ ಈಗಲೂ ಅನುಭವಿಸುತಿದ್ದಾರೆ.
ಕೊನೆಗೂ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಹಾಗೂ ಇತರರು ಸುಪ್ರೀಂ ಕೋರ್ಟಿಗೆ ನೀಡಿದ ದೂರು ಅರ್ಜಿಯನ್ನು ಅನುಸರಿಸಿ ನ್ಯಾಯಾಲಯವು 2011ರ ಮೇ 13ರಂದು ಇಡೀ ದೇಶದಲ್ಲಿ ಎಂಡೋಸಲ್ಫಾನ್‌ನ ಬಳಕೆ, ಉಪಯೋಗ ಹಾಗೂ ಮಾರಾಟವನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು.
ಇದರೊಂದಿಗೆ ಗೇರು ತೋಟಗಳ ಬಳಕೆಗಾಗಿ ಪ್ಲಾಂಟೇಶನ್ ಕಾರ್ಪೋರೇಷನ್ ಗೋದಾಮುಗಳಲ್ಲಿ ಉಳಿದಿದ್ದ ಎಂಡೋಸಲ್ಫಾನ್‌ನ ದಾಸ್ತಾನುಗಳನ್ನು ವೈಜ್ಞಾನಿಕವಾಗಿ ನಾಶ ಪಡಿಸುವಂತೆ ಆದೇಶ ನೀಡಿತ್ತು.
ಕೆಲದಿನಗಳಲ್ಲಿ ಕಾಸರಗೋಡಿನ ಪ್ಲಾಂಟೇಶನ್ ಕಾರ್ಪೋರೇಷನ್‌ನ ಗೋದಾಮುಗಳಲ್ಲಿ ಉಳಿದಿದ್ದ ಎಂಡೋಸಲ್ಫಾನ್‌ನ್ನು ನಾಶಪಡಿಸಲು ರಾಸಾಯನಿಕ ತಜ್ಞರು ಬಂದಾಗ ಸ್ಥಳೀಯರಿಂದ ಬಂದ ತೀವ್ರ ವಿರೋಧದಿಂದ ನಾಶ ಪಡಿಸುವ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಮುಂದೆ ಗೋದಾಮುಗಳಲ್ಲಿದ್ದ ಎಂಡೋಸಲ್ಫಾನ್‌ನ್ನು ಏನು ಮಾಡಲಾ ಯಿತು ಎಂಬ ಬಗ್ಗೆ ಸಾರ್ವಜನಿಕರಿಗೆ ಯಾವುದೇ ಮಾಹಿತಿ ತಿಳಿಯಲೇ ಇಲ್ಲ. ಜನರೂ ಅದನ್ನು ಮರೆತು ಬಿಟ್ಟರು.
ಮಣಿಯಾಣಿ ನೀಡಿದ ಸುಳಿವು: ಇದಾದ ಎರಡು ವರ್ಷಗಳ ಬಳಿಕ 2013ರಲ್ಲಿ ಗೇರು ಕಾರ್ಪೋರೇಷನ್‌ನ ಸಿಬ್ಬಂದಿಯಾಗಿ ನಿವೃತ್ತರಾಗಿದ್ದ ಅಚ್ಚುತ ಮಣಿಯಾಣಿ ಎಂಬವರು 'ಸುಮಾರು 600 ಲೀ. ಎಂಡೋಸಲ್ಫಾನ್‌ನ್ನು ಕೇರಳ-ಕರ್ನಾಟಕ ಗಡಿಭಾಗದಲ್ಲಿರುವ ಮಿಂಚಿನಪದವು ಎಂಬಲ್ಲಿರುವ ಗೇರುತೋಟದ ಪಾಳು ಬಾವಿಯೊಂದರಲ್ಲಿ ಕ್ಯಾನ್ ಸಮೇತ 30 ಅಡಿ ಕೆಳಗೆ ಹೂಳಿದ್ದು, ಮೇಲೆ ಮಣ್ಣು ಹಾಕಲಾಗಿದೆ.' ಎಂಬ ಮಾಹಿತಿಯನ್ನು ನೀಡಿದ್ದಲ್ಲದೇ, ಈ ಕಾರ್ಯಾಚರಣೆಯಲ್ಲಿ ತಾನೂ ಭಾಗಿಯಾಗಿದ್ದಾಗಿ ಬಹಿರಂಗ ಪಡಿಸಿದ್ದರು.
ದ.ಕ.ಜಿಲ್ಲಾಡಳಿತಕ್ಕೆ ಮನವಿ: ಈ ವಿಚಾರ ತಿಳಿದ ಉಡುಪಿ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ತಕ್ಷಣವೇ, ಈ ಕುರಿತು ಸಮಗ್ರ ಸಮೀಕ್ಷೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರೂ, ಅದು ಸಮಸ್ಯೆ ಬಗೆಹರಿಸಲು ಮುಂದಾಗಲಿಲ್ಲ.
ಹೀಗಾಗಿ ಪ್ರತಿಷ್ಠಾನ ಇದೀಗ ಎಂಡೋಸಲ್ಫಾನ್‌ನ್ನು ಹೀಗೆ ಹೂಳಿದ್ದರೆ ಅದು ಸೊರಿಕೆಯಾದರೆ ಕೇರಳ- ಕರ್ನಾಟಕದ ಗಡಿ ಭಾಗದಲ್ಲಿ ಭಾರೀ ಅಪಾಯ ಎದುರಾಗುವುದು ಮಾತ್ರವಲ್ಲದೇ, ಗ್ರಾಮಗಳ ಅಂತರ್ಜಲ ಸಂಪೂರ್ಣ ಕಲುಷಿತಗೊಳ್ಳುವುದು ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಮುಂದೆ ದೂರು ಅರ್ಜಿ ಸಲ್ಲಿಸುವುದು ಅನಿವಾರ್ಯವಾಯಿತು ಎಂದು ಡಾ.ಶ್ಯಾನುಭಾಗ್ ತಿಳಿಸಿದರು.
ಗಂಭೀರತೆ ಅರಿತ ನ್ಯಾ.ಫಣೀಂದ್ರ: 2022ರ ಜ.11ರಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರು ನಡೆಸಿದ ಸಭೆಯಲ್ಲಿ ಈ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದ್ದರು. ಈ ಸಭೆಯ ನಡಾವಳಿಯನ್ನು ಡಾ.ಶ್ಯಾನುಭಾಗ್ ತಮ್ಮ ಅರ್ಜಿಯೊಂದಿಗೆ ಲಗತ್ತಿಸಿ ಹಸಿರು ಪೀಠದೆದುರು ಮಂಡಿಸಿದ್ದರು. ಕೇರಳದ ಪ್ಲಾಂಟೇಷನ್ ಕಾರ್ಪೋರೇಷನ್ ಪಾಳುಬಾವಿಯಲ್ಲಿ ಅಕ್ರಮವಾಗಿ ಹೂಳಲಾಗಿದೆ ಎನ್ನಲಾದ ಎಂಡೋಸಲ್ಫಾನನ್ನು ಅಲ್ಲಿಂದ ತೆಗೆಯುವ ಅಗತ್ಯತೆಯನ್ನು ಈ ನಡಾವಳಿಯಲ್ಲಿ ಒತ್ತಿ ಹೇಳಲಾಗಿತ್ತು ಎಂದರು.
ಈ ಸಭೆಯಲ್ಲಿ ಭಾಗವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಅಂದಿನ ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ಅವರು, 'ನೆಟ್ಟಣಿಗೆ ಗ್ರಾಮದ ಬಳಿಯ ಪಾಳು ಬಾವಿಯಲ್ಲಿ ಎಂಡೋಸಲ್ಫಾನ್ ಕ್ಯಾನ್‌ಗಳನ್ನು ಹಾಕಿರುವುದರ ಕುರಿತು ತಾನು ಪುತ್ತೂರು ಸಹಾಯಕ ಕಮಿಷನರ್ ಆಗಿದ್ದ ಕಾಲದಲ್ಲಿ ಜಿಲ್ಲಾಡಳಿತಕ್ಕೆ ವರದಿಯೊಂದನ್ನು ಸಲ್ಲಿಸಿದ್ದೆ. ಇದು ನಿಜವಾದಲ್ಲಿ ಸ್ಫೋಟಗೊಳ್ಳುವ ಬಾಂಬ್ ಇದ್ದಂತೆ.' ಎಂದು ಹೇಳಿರುವುದನ್ನು ಅದರಲ್ಲಿ ಉಲ್ಲೇಖಿಸಲಾಗಿತ್ತು.
ಕೇರಳ ಪ್ರಾಧಿಕಾರಕ್ಕೆ ಪತ್ರ: 2022ರ ಜ.21ರಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ಕೇರಳ ಕಾನೂನು ಸೇವಾ ಪ್ರಾಧಿಕಾರಕ್ಕೆ ಬರೆದ ಪತ್ರದಲ್ಲಿ 'ಕೇರಳದ ಕಾಸರಗೋಡಿನ ನೆಟ್ಟಣಿಗೆ ಗ್ರಾಮದಲ್ಲಿರುವ ಪಾಳು ಬಾವಿಗೆ ಎಂಡೋಸಲ್ಫಾನ್ ಕ್ಯಾನ್‌ಗಳನ್ನು ಹಾಕಿರುವ ಸಮಸ್ಯೆಯನ್ನು ಪರಿಹರಿಸಲು ಕ್ರಮದ ಅಗತ್ಯವಿದೆ' ಎಂದು ಸೂಚಿಸಿದ್ದರೂ, ಈ ಬಗ್ಗೆ ಕೇರಳ ಕಾನೂನು ಪ್ರಾಧಿಕಾರವಾಗಲಿ ಅಥವಾ ಸರಕಾರವಾಗಲಿ ಯಾವುದೇ ಕ್ರಮಕೈಗೊಳ್ಳದ ಕಾರಣ ತಾವು ನ್ಯಾಯಾಲಯದ ಮೆಟ್ಟಲು ಏರಿ ದೂರು ಅರ್ಜಿ ಸಲ್ಲಿಸುವುದು ಅನಿವಾರ್ಯವಾಯಿತು ಎಂದು ಡಾ.ಶ್ಯಾನುಭಾಗ್ ತಿಳಿಸಿದ್ದಾರೆ.
ಕೇರಳ ಎಂಡೋಸಲ್ಫಾನ್ ಹೂಳಿದೆ ಎನ್ನಲಾದ ಪ್ರದೇಶ ಕೇರಳದಲ್ಲಿದ್ದು, ಅದರ ಪರಿಣಾಮ ಮಾತ್ರ ಪಕ್ಕದಲ್ಲಿರುವ ಕರ್ನಾಟಕದ ನಟ್ಟಣಿಗೆ ಗ್ರಾಮದ ಮೇಲೆ ಬೀಳಲಿದೆ. ನೆಟ್ಟಣಿಗೆ ಗ್ರಾಮದಲ್ಲಿ ಎಂಡೋಸಲ್ಫಾನ್ ಸಿಂಪಡಿಕೆ ನಡೆದಿಲ್ಲವಾ ದರೂ ಆ ಗ್ರಾಮದಲ್ಲಿ ಈಗ 113 ಮಂದಿ ಎಂಡೋಸಲ್ಫಾನ್ ಸಂತ್ರಸ್ಥರಿದ್ದಾರೆ. ಕೋರ್ಟ್ ಮೂಲಕ ಅವರಿಗೆ ಈಗಲೂ ಕೇರಳ ಸರಕಾರದಿಂದ ಪರಿಹಾರ ದೊರೆಯುತ್ತಿದೆ ಎಂದು ಅವರು ವಿವರಿಸಿದರು.
ಸಮಸ್ಯೆಯ ಗಂಭೀರತೆ ಹಾಗೂ ಸರಕಾರದ ಧೋರಣೆ ಹಾಗೂ ನಿಷ್ಕೃಿಯತೆಯನ್ನು ಗಮನಿಸಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ದಕ್ಷಿಣ ಪೀಠ ಇದೀಗ ಕೇಂದ್ರ ಹಾಗೂ ಉಭಯ ರಾಜ್ಯ ಸರಕಾರಗಳ ಪರಿಸರ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಗಳ ವಿರುದ್ಧ ಆದೇಶ ಹೊರಡಿಸಿದೆ ಎಂದು ಡಾ.ಶ್ಯಾನುಭಾಗ್ ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನ್ಯಾಯವಾದಿ ಗೌರವ್ ಕುಮಾರ್ ಬನ್ಸಾಲ್, ಅನುರಾಗ್ ಕಿಣಿ, ವಿಜಯಲಕ್ಷ್ಮೀ, ರಮೇಶ್ ಶೆಣೈ ಮುಂತಾದವರಿದ್ದರು.
(ಎಂಡೋಸಲ್ಫಾನ್‌ನ್ನು ಹೂಳಿರುವ ಮಿಂಚಿನಪದವು ಪ್ರದೇಶಕ್ಕೆ ಡಾ.ಶ್ಯಾನುಭಾಗ್ ನೇತೃತ್ವದ ತಂಡ ರಹಸ್ಯವಾಗಿ ಭೇಟಿ ನೀಡಿದಾಗ)