ನವದೆಹಲಿ: ದೇಶದ ಹೆಚ್ಚಿನ ರಾಜ್ಯಗಳು ಈ ವರ್ಷ ಅತಿವೃಷ್ಟಿ ಹಾಗೂ ಬರದಿಂದ ತತ್ತರಿಸಿವೆ. ಆದರೆ, ಕೇಂದ್ರ ಸರ್ಕಾರ ಈ ಸಾಲಿನಲ್ಲಿ ಈವರೆಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ (ಎನ್‌ಡಿಆರ್‌ಎಫ್) ಎರಡು ರಾಜ್ಯಗಳಿಗಷ್ಟೇ ಹಣ ಬಿಡುಗಡೆ ಮಾಡಿದೆ.
ರಾಜ್ಯಸಭೆಯಲ್ಲಿ ಕಾಂಗ್ರೆಸ್‌ನ ಸದಸ್ಯ ಸಯ್ಯದ್ ನಾಸಿರ್ ಹುಸೇನ್ ಕೇಳಿರುವ ಪ್ರಶ್ನೆಗೆ ಕೇಂದ್ರ ಪರಿಸರ, ಅರಣ್ಯ ಹಾಗೂ ತಾಪಮಾನ ಬದಲಾವಣೆ ಸಚಿವರು ನೀಡಿರುವ ಉತ್ತರದಲ್ಲಿ ಈ ಮಾಹಿತಿ ಇದೆ.
ಜುಲೈ ಹಾಗೂ ಆಗಸ್ಟ್‌ನಲ್ಲಿ ಸುರಿದ ಭಾರಿ ಮಳೆಯಿಂದ ಸಂಕಷ್ಟಕ್ಕೆ ಒಳಗಾಗಿದ್ದ ಹಿಮಾಚಲ ಪ್ರದೇಶಕ್ಕೆ ₹389 ಕೋಟಿ ಹಾಗೂ ಸಿಕ್ಕಿಂಗೆ ₹46 ಕೋಟಿ ಬಿಡುಗಡೆಗೊಳಿಸಿದೆ. ಬರಪೀಡಿತ ಜನರಿಗೆ ನೆರವಾಗಲು ತುರ್ತಾಗಿ ಅನುದಾನ ಬಿಡುಗಡೆ ಮಾಡುವಂತೆ ಕರ್ನಾಟಕ ಸೇರಿ ಹಲವು ರಾಜ್ಯಗಳು ಮನವಿ ಸಲ್ಲಿಸಿದರೂ ಕೇಂದ್ರ ಸರ್ಕಾರ ಈತನಕ ಹಣ ಬಿಡುಗಡೆ ಮಾಡಿಲ್ಲ. ಕೇಂದ್ರದ ಅಧ್ಯಯನ ತಂಡವು ಸಲ್ಲಿಸಿದ ವರದಿಗಳನ್ನು ಉನ್ನತ ಮಟ್ಟದ ಸಚಿವರ ತಂಡವು ಪರಾಮರ್ಶೆ ನಡೆಸಿದ ಬಳಿಕ ರಾಜ್ಯಗಳಿಗೆ ಈ ಅನುದಾನ ನೀಡಲಾಗುತ್ತದೆ ಎಂದು ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ.
(ಎಸ್‌ಡಿಆರ್‌ಎಫ್) ಭಾಗಶ: ಪಾವತಿ:
ರಾಜ್ಯ ವಿಪತ್ತು ಸ್ಪಂದನೆ ನಿಧಿಯಿಂದ (ಎಸ್‌ಡಿಆರ್‌ಎಫ್) ಈ ವರ್ಷ 28 ರಾಜ್ಯಗಳಿಗೆ ಈ ವರ್ಷ ₹25,565 ಕೋಟಿ ಹಂಚಿಕೆ ಮಾಡಲಾಗಿದೆ. ಇದರಲ್ಲಿ ಕೇಂದ್ರದ ಪಾಲು ₹19,572 ಕೋಟಿ. ರಾಜ್ಯದ್ದು ₹5,992 ಕೋಟಿ. ಗೃಹ ಸಚಿವಾಲಯದ ಶಿಫಾರಸಿನ ಮೇರೆಗೆ ಕೇಂದ್ರ ಹಣಕಾಸು ಸಚಿವಾಲಯವು ಜುಲೈ ತಿಂಗಳಿನಲ್ಲೇ ಮೊದಲ ಕಂತನ್ನು (₹10,031 ಕೋಟಿ) ರಾಜ್ಯಗಳಿಗೆ ಬಿಡುಗಡೆಗೊಳಿಸಿತ್ತು. ಕರ್ನಾಟಕಕ್ಕೆ ಬರಬೇಕಿದ್ದ ₹928 ಕೋಟಿ ಪೈಕಿ ₹348 ಕೋಟಿ ಬಿಡುಗಡೆಯಾಗಿತ್ತು. ಹಿಮಾಚಲ ಪ್ರದೇಶ ಹಾಗೂ ಸಿಕ್ಕಿಂ ರಾಜ್ಯಗಳಿಗೆ ಎರಡನೇ ಕಂತು ಬಂದಿದೆ.
15ನೇ ಹಣಕಾಸು ಆಯೋಗದ ಶಿಫಾರಸಿನ ಪ್ರಕಾರ, ಕೇಂದ್ರ ಸರ್ಕಾರವು ಎಸ್‌ಡಿಆರ್‌ಎಫ್‌ಗೆ 2021-22ರಿಂದ 2025-26ರ ಅವಧಿಗೆ ₹1,28,122 ಕೋಟಿ ಹಂಚಿಕೆ ಮಾಡಿದೆ. ಇದರಲ್ಲಿ ಕೇಂದ್ರ ಸರ್ಕಾರದ ಪಾಲು ₹98,080 ಕೋಟಿ. ಕೇಂದ್ರವು ಇಲ್ಲಿಯವರೆಗೆ ₹42,566 ಕೋಟಿಯನ್ನು ರಾಜ್ಯಗಳಿಗೆ ಪಾವತಿಸಿದೆ ಎಂದು ತಿಳಿಸಿವೆ.