ನವದೆಹಲಿ: 'ಹರ್‌ದೀಪ್ ಸಿಂಗ್ ನಿಜ್ಜರ್ ಸೇರಿದಂತೆ ಕೆಲ ಸಿಖ್ ಪ್ರತ್ಯೇಕತಾವಾದಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಭಾರತವು ಏಪ್ರಿಲ್‌ನಲ್ಲಿ 'ರಹಸ್ಯ ಟಿಪ್ಪಣಿ' ನೀಡಿತ್ತು ಎಂಬ ವರದಿಗಳು ಸುಳ್ಳು ಹಾಗೂ ಸಂಪೂರ್ಣ ಕಲ್ಪಿತ' ಎಂದು ಭಾರತ ಪ್ರತಿಕ್ರಿಯಿಸಿದೆ.
ನವದೆಹಲಿ: 'ಹರ್‌ದೀಪ್ ಸಿಂಗ್ ನಿಜ್ಜರ್ ಸೇರಿದಂತೆ ಕೆಲ ಸಿಖ್ ಪ್ರತ್ಯೇಕತಾವಾದಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಭಾರತವು ಏಪ್ರಿಲ್‌ನಲ್ಲಿ 'ರಹಸ್ಯ ಟಿಪ್ಪಣಿ' ನೀಡಿತ್ತು ಎಂಬ ವರದಿಗಳು ಸುಳ್ಳು ಹಾಗೂ ಸಂಪೂರ್ಣ ಕಲ್ಪಿತ' ಎಂದು ಭಾರತ ಪ್ರತಿಕ್ರಿಯಿಸಿದೆ.
'ಇಂತಹ ಯಾವುದೇ ಟಿಪ್ಪಣಿ ಅಥವಾ ಜ್ಞಾಪನಾಪತ್ರವನ್ನು ಭಾರತ ನೀಡಿಲ್ಲ. ಈ ಕುರಿತ ವರದಿಗಳು ಶುದ್ಧ ಸುಳ್ಳು ಹಾಗೂ ಕಪೋಲಕಲ್ಪಿತ' ಎಂದು ವಿದೇಶಾಂಗ ಸಚಿವಾಲಯ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.
'ಈ ಕುರಿತು ಸುದ್ದಿ ಪ್ರಕಟಿಸಿರುವ ಸುದ್ದಿಸಂಸ್ಥೆಯು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಸೃಷ್ಟಿಸುವ ಸುಳ್ಳು ಸಂಕಥನವನ್ನು ಪ್ರಚುರಪಡಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇದು, ಸುದ್ದಿಸಂಸ್ಥೆಯು ಈ ಹಿಂದಿನಿಂದಲೂ ನಡೆಸುತ್ತಿರುವ ನಿರಂತರ ತಪ್ಪುಮಾಹಿತಿ ಪ್ರಸಾರ ಕಾರ್ಯದ ಭಾಗವೂ ಆಗಿದೆ' ಎಂದು ಬಾಗ್ಚಿ ಹೇಳಿದ್ದಾರೆ.
ಅಮೆರಿಕದ ಆನ್‌ಲೈನ್ ಸುದ್ದಿಸಂಸ್ಥೆ 'ದಿ ಇಂಟರ್‌ಸೆಪ್ಟ್' ಈ ಕುರಿತ ಸುದ್ದಿಯನ್ನು ಪ್ರಕಟಿಸಿತ್ತು.
ಜೂನ್ 18ರಂದು ಖಾಲಿಸ್ತಾನಿ ಉಗ್ರ ಹರ್‌ದೀಪ್ ಸಿಂಗ್ ನಿಜ್ಜರ್ ಹತ್ಯೆಯಾಗಿತ್ತು. ಈ ಕುರಿತು ಪ್ರತಿಕ್ರಿಯಿಸಿದ್ದ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ, 'ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡ ಇದೆ' ಎಂದು ಆರೋಪಿಸಿದ್ದರು.
'ಪಶ್ಚಿಮ ರಾಷ್ಟ್ರಗಳಲ್ಲಿರುವ ನಿರ್ದಿಷ್ಟ ಸಿಖ್ ಗುಂಪುಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಭಾರತ ಸರ್ಕಾರ ಸೂಚನೆ ನೀಡಿತ್ತು. ವಿದೇಶಾಂಗ ಸಚಿವಾಲಯವು ಏಪ್ರಿಲ್‌ನಲ್ಲಿ ಈ ಸಂಬಂಧ ಪಟ್ಟಿಯೊಂದನ್ನು ಬಿಡುಗಡೆ ಮಾಡಿತ್ತು. ನಿಜ್ಜರ್ ಸೇರಿದಂತೆ ಭಾರತೀಯ ತನಿಖಾ ಸಂಸ್ಥೆಗಳಿಂದ ತನಿಖೆ ಎದುರಿಸುತ್ತಿರುವ ಸಿಖ್ ಪ್ರತ್ಯೇಕತಾವಾದಿಗಳ ಹೆಸರುಗಳನ್ನು ಈ ಪಟ್ಟಿ ಒಳಗೊಂಡಿತ್ತು' ಎಂದೂ 'ದಿ ಇಂಟರ್‌ಸೆಪ್ಟ್' ವರದಿ ಮಾಡಿತ್ತು.