ರಾಂಚಿ: ನನಗೆ ಆಹ್ವಾನ ಬಂದರೆ ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸುವೆ ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಹೇಳಿದ್ದಾರೆ.
'ಈವರೆಗೆ ನನಗೆ ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮದ ಆಹ್ವಾನ ಬಂದಿಲ್ಲ. ಒಂದು ವೇಳೆ ಆಹ್ವಾನ ಬಂದರೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ' ಎಂದು ಸೊರೇನ್ ಪತ್ರಕರ್ತರಿಗೆ ತಿಳಿಸಿದ್ದಾರೆ.
ನಾನು ಧಾರ್ಮಿಕ ನಂಬಿಕೆ ಉಳ್ಳ ವ್ಯಕ್ತಿ. ದೇವಾಲಯ, ಗುರುದ್ವಾರಗಳು ಇತ್ಯಾದಿ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡುತ್ತೇನೆ ಎಂದು ಹೇಳಿದ್ದಾರೆ.
ತಮಗೆ ಇ.ಡಿ ಸಮನ್ಸ್ ನೀಡಿರುವ ಕುರಿತಂತೆ ಪ್ರತಿಕ್ರಿಯಿಸಿರುವ ಅವರು, ಯಾರೊಬ್ಬರೂ ಸತ್ಯವನ್ನು ಅಡಗಿಸಲು ಸಾಧ್ಯವಿಲ್ಲ. ಇಡೀ ದೇಶವೇ ನೋಡುತ್ತಿದೆ. ನನಗೆ ಹೇಳಲು ಬೇರೆ ಏನೂ ಇಲ್ಲ ಎಂದಿದ್ದಾರೆ.
ನಮ್ಮ ಸರ್ಕಾರ 4 ವರ್ಷ ಪೂರೈಸಿದೆ. ಜೆಎಂಎಂ-ಕಾಂಗ್ರೆಸ್-ಆರ್‌ಜೆಡಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ವಿಪಕ್ಷಗಳು ಸರ್ಕಾರವನ್ನು ಅತಂತ್ರಗೊಳಿಸಲು ಯತ್ನಿಸುತ್ತಿವೆ ಎಂದು ದೂರಿದರು.
'ನಾವು ಆದಿವಾಸಿಗಳು, ಆದರೆ, ಮೂರ್ಖರಲ್ಲ. ವಿಪಕ್ಷಗಳನ್ನು ಹೇಗೆ ನಿರ್ವಹಿಸಬೇಕೆಂದು ನಮಗೆ ತಿಳಿದಿದೆ' ಎಂದು ಗುಡುಗಿದರು.
ಭೂ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ(ಇ.ಡಿ) ನೀಡಿದ್ದ 5ನೇ ಸಮನ್ಸ್‌ಗೂ ಸೊರೇನ್ ಸೊಪ್ಪು ಹಾಕಿಲ್ಲ.