ನವದೆಹಲಿ: ರಾಜ್ಯವೊಂದನ್ನು ಕೇಂದ್ರಾಡಳಿತ ಪ್ರದೇಶವಾಗಿ ಪರಿವರ್ತಿಸುವುದರ ಪರಿಣಾಮಗಳು ಬಹಳ ಗಂಭೀರವಾಗಿರುತ್ತವೆ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ತಾವು ಬರೆದಿರುವ ಪ್ರತ್ಯೇಕ ತೀರ್ಪಿನಲ್ಲಿ ಹೇಳಿದ್ದಾರೆ. ಈ ರೀತಿಯ ಕ್ರಮವನ್ನು ಬಲವಾದ ಕಾರಣ ನೀಡಿ ಸಮರ್ಥಿಸಿಕೊಳ್ಳಬೇಕಾಗುತ್ತದೆ ಎಂದಿದ್ದಾರೆ.
'ಕೇಂದ್ರಾಡಳಿತ ಪ್ರದೇಶಗಳು ಸಾಮಾನ್ಯವಾಗಿ ಭೌಗೋಳಿಕವಾಗಿ ಚಿಕ್ಕದಾಗಿರುತ್ತವೆ. ಅಥವಾ ಅಪರೂಪದ ಕಾರಣಗಳಿಗಾಗಿ ಅವುಗಳ ರಚನೆ ಆಗಬಹುದು. ರಾಜ್ಯವೊಂದನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಪರಿವರ್ತಿಸುವುದರ ಪರಿಣಾಮವಾಗಿ, ಪ್ರಜೆಗಳಿಗೆ ತಮ್ಮದಾದ ರಾಜ್ಯ ಇಲ್ಲವಾಗುತ್ತದೆ, ಚುನಾಯಿತ ಸರ್ಕಾರವನ್ನು ನಿರಾಕರಿಸಿದಂತೆ ಆಗುತ್ತದೆ ಹಾಗೂ ಒಕ್ಕೂಟ ವ್ಯವಸ್ಥೆಯ ಮೇಲೆ ಅದು ಪರಿಣಾಮ ಬೀರುತ್ತದೆ' ಎಂದು ಅವರು ತೀರ್ಪಿನಲ್ಲಿ ಹೇಳಿದ್ದಾರೆ.
ರಾಜ್ಯವೊಂದನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿಸುವ ತೀರ್ಮಾನವು ಸಂವಿಧಾನದ 3ನೆಯ ವಿಧಿಗೆ ಅನುಗುಣವಾಗಿ ಇರಬೇಕು ಎಂದು ಹೇಳಿದ್ದಾರೆ. ಸಂವಿಧಾನದ 370ನೆಯ ವಿಧಿಯ ಅಡಿ ನೀಡಿದ್ದ ವಿಶೇಷ ಸ್ಥಾನಮಾನವು ಶಾಶ್ವತ ಸ್ವರೂಪದ್ದಾಗಿರಲಿಲ್ಲ ಎಂದು ಅವರು ಹೇಳಿದ್ದಾರೆ.
'ವಿಶೇಷ ಸ್ಥಾನಮಾನವನ್ನು ಹಿಂಪಡೆದಿರುವುದು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವುದಿಲ್ಲ. ಜಮ್ಮು ಮತ್ತು ಕಾಶ್ಮೀರದ ಜನರಿಗೆ ದೇಶದ ಇತರ ಕಡೆಗಳಲ್ಲಿನ ಜನರಿಗೆ ಇರುವ ಹಕ್ಕುಗಳೇ ಇರುತ್ತವೆ' ಎಂದು ವಿವರಿಸಿದ್ದಾರೆ.