ಕಾಸರಗೋಡು: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಬೃಹತ್ ಯೋಜನೆ ಸಾಂಸ್ಕೃತಿಕ ಭವನದ ಲೋಕಾರ್ಪಣೆ ಕಾರ್ಯಕ್ರಮ ಡಿ. 26ರಂದು ನಡೆಯಲಿದ್ದು, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಸಿರಿಬಾಗಿಲು ವೆಂಕಪ್ಪಯ್ಯ ಸ್ಮಾರಕ ಸಾಂಸ್ಕ್ರತಿಕ ಪ್ರತಿಷ್ಠಾನ ಹಾಗೂ ದಾನಿಗಳ ಸಹಕಾರದೊಂದಿಗೆ ಭವನ ತಲೆಯೆತ್ತಿದೆ ಎಂದು ಸಿರಿಬಾಗಿಲು ಸಾಂಸ್ಕøತಿಕ ಭವನ ಸಂಚಾಲಕ ರಾಮಕೃಷ್ಣ ಮಯ್ಯ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಡಿ. 25ರಂದು ಮಧ್ಯಾಹ್ನ 2ಗಂಟೆಗೆ ನಡೆಯುವ ಸಮಾರಂಭದಲ್ಲಿ ರಾಜರ್ಷಿ ಪದ್ಮವಿಭೂಷಣ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಸಾಂಸ್ಕøತಿಕ ಭವನ ಲೋಕಾರ್ಪಣೆಗೈಯುವರು. ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಮಾಣಿಲ ಶ್ರೀಧಾಮದ ಶ್ರಿ ಮೋಹನದಾಸ ಸ್ವಾಮೀಜಿ, ಉಪ್ಪಳ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡುವರು. ಕರ್ನಾಟಕ ವಿಧಾನಸಭಾ ಸ್ಪೀಕರ್ ಯು.ಟಿ ಖಾದರ್ ಸಮಾರಂಭ ಉದ್ಘಾಟಿಸುವರು. ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಅಧ್ಯಕ್ಷತೆ ವಹಿಸುವರು. ಸಂಸದ ನಳಿನ್‍ಕುಮಾರ್ ಕಟೀಲ್, ಶಾಸಕರಾದ ಎನ್.ಎ ನೆಲ್ಲಿಕುನ್ನು, ಎ.ಕೆ.ಎಂ ಅಶ್ರಫ್, ರಾಜೇಶ್ ನಾಯ್ಕ್ ಬಂಟ್ವಾಳ, ಹರೀಶ ಪೂಂಜ ಬೆಳ್ತಂಗಡಿ, ಮಾಜಿ ಸಚಿವ ಶ್ರೀನಿವಾಸ ಪೂಜಾರಿ, ಮಧೂರು ಗ್ರಾಪಂ ಅಧ್ಯಕ್ಷ ಕೆ. ಗೋಪಾಲಕೃಷ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಉದ್ಯಮಿ, ಸಮಾಜಸೇವಕ ಸದಾಶಿವ ಶೆಟ್ಟಿ ಕುಳೂರುಕನ್ಯಾನ ಅವರು ಯಕ್ಷದರ್ಶಿನಿಯನ್ನು, ಉದ್ಯಮಿ ಕೆ.ಕೆ ಶೆಟ್ಟಿ ಗ್ರಂಥಾಲಯವನ್ನು ಉದ್ಘಾಟಿಸುವರು. ಮರೆಯಲಾಗದ ಮಹಾನುಭಾವರು ಪುಸ್ತಕವನ್ನು ಯತಿವರ್ಯರು ಹಾಗೂ ಮರೆಯಲಾಗದ ಮಹಾನುಭಾವರು ಛಾಯಾಚಿತ್ರ ಫಲಕವನ್ನು ಧರ್ಮದರ್ಶಿ ಹರಿಕೃಷ್ಣ ಪುನರೂರು ಅನಾವರಣಗೊಳಿಸುವರು. ಕಾರ್ಯಕ್ರಮದ ಅಂಗವಾಗಿ ಶ್ರೀಧರ್ಮಸ್ಥಳ ಮೇಳದವರಿಂದ ನಂದಿ ನಂದಿನಿ ಯಕ್ಷಗಾನ ಬಯಲಾಟ ಜರುಗಲಿರುವುದಾಗಿ ತಿಳಿಸಿದರು.
ಸುದ್ದಿಗೋಷ್ಠೀಯಲ್ಲಿ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ಮುಕೇಶ್, ರಾಧಾಕೃಷ್ಣ ಉಳಿಯತ್ತಡ್ಕ, ಲಕ್ಷ್ಮೀನಾರಾಯಣ ಕಾವು, ಶಿವರಾಮ ಕಾಸರಗೋಡು ಉಪಸ್ಥಿತರಿದ್ದರು.