ಬದಿಯಡ್ಕ : ರೋಟರಿ ಕ್ಲಬ್ ಬದಿಯಡ್ಕ ಹಾಗೂ ನೋವಾ ಐ ವಿ ಎಫ್ ಆಸ್ಪತ್ರೆ ಪಂಪ್ ವೆಲ್ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಭಾನುವಾರ ವಳಮಲೆ ಇರಾ ಸಭಾ ಭವನದಲ್ಲಿ ಉಚಿತ ಬಂಜೆತನ ನಿವಾರಣಾ ವೈದ್ಯಕೀಯ ಶಿಬಿರ ಜರಗಿತು. ಸಮಾರಂಭದಲ್ಲಿ ಬದಿಯಡ್ಕ ರೋಟರಿ ಅಧ್ಯಕ್ಷ ಬಿ, ರಾಧಾಕೃಷ್ಣ ಪೈ ಸಭಾಧ್ಯಕ್ಷತೆ ವಹಿಸಿ ಮಾತನಾಡಿದರು.
ಸಭೆಯಲ್ಲಿ ರೋಟರಿ ಹಿರಿಯ ಸದಸ್ಯರಾದ ಪಿ. ಗಂಗಾಧರ ಆಳ್ವ ಪೆರಡಾಲ ಅವರು ಶಿಬಿರದ ಫಲಾನುಭವಿ ದಂಪತಿಗಳಿಗಾಗುವ ಪ್ರಯೋಜನ, ಸಮಾಜಕ್ಕಾಗುವ ಸಂತಸ ಮತ್ತು ರೋಟರಿ ಇಂಟರ್ ನ್ಯಾಷನಲ್ ಸಂಸ್ಥೆಯು ಆರೋಗ್ಯ ವಲಯಕ್ಕಾಗಿ ಮಾಡುವ ಸೇವಾಕಾರ್ಯಗಳ ಕುರಿತು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಮಾಹಿತಿ ನೀಡಿದರು.
ಮಂಗಳೂರಿನ ಖ್ಯಾತ ನೋವಾ ಐ ವಿ ಎಫ್ ಆಸ್ಪತ್ರೆಯ ನುರಿತ ತಜ್ಞೆ ಡಾ. ಶವೀಝ್ ಫೈಝಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಬಂಜೆತನವನ್ನು ತಪಾಸಣೆ, ಮಾರ್ಗಸೂಚಿಯನ್ನು ತಪ್ಪದೇ ಪಾಲನೆ ಹಾಗೂ ನಿಯಮಿತವಾದ ಚಿಕಿತ್ಸೆಯ ಮೂಲಕ ದಂಪತಿಗಳು ಸಂತಾನವನ್ನು ಪಡೆಯುವ ಮೂಲಕ ಸಂತಸವನ್ನು ಹೆಚ್ಚಿಸಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು. ಬದಿಯಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆಶಾ ಕಾರ್ಯಕರ್ತೆಯರಾದ ಲೀಲಾ ಹಾಗೂ ಚಂದ್ರಾವತಿ ಶುಭಾಶಂಸನೆಗೈದರು. ಶಿಬಿರದ ಪ್ರಬಂಧಕ ಹರ್ಷಾ, ಗೌತಮ್ ಉಪ್ಪಳ, ಸುರೇಖಾ ಅವರು ಫಲಾನುಭವಿ ದಂಪತಿಗಳಿಗೆ ಸೂಕ್ತ ಸಲಹೆ, ಸೂಚನೆ, ಸಹಕಾರಗಳನ್ನಿತ್ತರು.
ಬದಿಯಡ್ಕ ರೋಟರಿ ಸದಸ್ಯ ಅನಂತ ಕುಮಾರ್ ಬರ್ಲಾ ಕಾರ್ಯಕ್ರಮ ನಿರೂಪಿಸಿದರು. ರೋಟರಿ ಬದಿಯಡ್ಕದ ಕಾರ್ಯದರ್ಶಿ ವೈ.ರಾಘವೇಂದ್ರ ಪ್ರಸಾದ್ ವಂದಿಸಿದರು.