ಕಾಸರಗೋಡು: ಗಡಿನಾಡಿನಲ್ಲಿ ಕನ್ನಡದ ಚಟುವಟಿಕೆ ತಳಮಟ್ಟದ ವರೆಗೆ ವಿಸ್ತರಿಸಲು ತಾಲೂಕುಘಟಕಗಳನ್ನು ಮತ್ತಷ್ಟು ಬಲಪಡಿಸಬೇಕಾದ ಅಗತ್ಯವಿದೆ ಎಂಬುದಾಗಿ ಕನ್ನಡ ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಅಧ್ಯಕ್ಷ ಡಾ. ಮಹೇಶ್ ಜೋಷಿ ತಿಳಿಸಿದ್ದಾರೆ.
ಅವರು ಬುಧವಾರ ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಕಾಸರಗೋಡು ಕಚೇರಿಯಲ್ಲಿ ಆಯೋಜಿಸಲಾಗಿದ್ದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಕೆಲವೊಂದು ಆವಿಷ್ಕಾರ, ಹೊಸ ಕಾನೂನು ವ್ಯವಸ್ಥೆಯನ್ನು ಜಾರಿಗೆ ತಂದಿದ್ದು, ಎಲ್ಲ ಘಟಕಗಳೂ ಇದಕ್ಕೆ ಬದ್ಧವಾಗಿ ಕಾರ್ಯನಿರ್ವಹಿಸುವುದು ಅನಿವಾರ್ಯ. ಪ್ರಜಾಪ್ರಭುತ್ವ ವ್ಯವಸ್ಥೆಯಂತೆ ಸಾಹಿತ್ಯ ರಂಗದಲ್ಲೂ ಗುಣಮಟ್ಟ ಕಾಯ್ದುಕೊಳ್ಳುವುದು ಅಗತ್ಯ. ಇದಕ್ಕಾಗಿ ಪರಿಷತ್ ನಿರಂತರ ಶ್ರಮಿಸುತ್ತಿದೆ. ತಾಲೂಕು ಘಟಕಗಳನ್ನು ಬಲಪಡಿಸುವುದು, ಕಾಸರಗೋಡು ಘಟಕಕ್ಕೆ ತಾತ್ಕಾಲಿಕ ಅಧ್ಯಕ್ಷರ ನೇಮಕ, ಪರಿಷತ್ ಕಾನೂನಿನ ಬಗ್ಗೆ ಅರಿವು ಮುಡಿಸುವುದು, ಸಂಘಟನೆ ಬಲಪಡಿಸುವುದರ ಜತೆಗೆ ಗಡಿನಾಡ ಘಟಕದಲ್ಲಿ ಪರಿಷತ್‍ನ ಕಾರ್ಯಚಟುವಟಿಕೆ, ಯೋಜನೆಗಳ ಬಗ್ಗೆ ಸಮಾಲೋಚಿಸುವ ನಿಟ್ಟಿನಲ್ಲಿ ಸಭೆ ಆಯೋಜಿಸಿರುವುದಾಗಿ ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ ದ.ಕ ಜಿಲ್ಲಾ ಘಟಕ ಅಧ್ಯಕ್ಷ ಡಾ. ಎಂ.ಪಿ ಶ್ರೀನಾಥ್, ಡಾ. ರಮಾನಂದ ಬನಾರಿ, ಡಾ. ಪಿ.ಕೃಷ್ಣಭಟ್, ಡಾ. ರಾಜಗೋಪಾಲ್ ಉಪಸ್ಥಿತರಿದ್ದರು. ಕಸಾಪ ಕೇರಳ ಗಡಿನಾಡ ಘಟಕದ ಚಟುವಟಿಕೆ ವಿಸ್ತರಿಸುವುದು, ಗಡಿನಾಡಿನಲ್ಲಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆ, ಗಡಿನಾಡ ಕನ್ನಡ ಮಾಧ್ಯಮ ಶಾಲೆಗಳ ಸ್ಥಿತಿಗತಿ ಬಗ್ಗೆ ಸದಸ್ಯರು ಅನಿಸಿಕೆ ವ್ಯಕ್ತಪಡಿಸಿದರು. ಕಸಾಪ ಗಡಿನಾಡ ಘಟಕ ಗ್ವರವ ಕಾರ್ಯದರ್ಶಿ ಪ್ರದೀಪ್ ಶೆಟ್ಟಿ ಬೇಳ ಸ್ವಾಗತಿಸಿದರು. ಇನ್ನೊಬ್ಬ ಗೌರವ ಕಾರ್ಯದರ್ಶಿ ಶೇಖರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಡಾ. ಜಯಪ್ರಕಾಶ್ ನಾರಾಯಣ್ ವಂದಿಸಿದರು.