ರಾಂಚಿ: ಕಾಂಗ್ರೆಸ್‌ನ ರಾಜ್ಯಸಭೆ ಸದಸ್ಯ, ಜಾರ್ಖಂಡ್‌ನ ಧೀರಜ್ ಸಾಹು ಅವರಿಗೆ ಸೇರಿದ ಸ್ಥಳಗಳಲ್ಲಿ ದಾಳಿ ನಡೆಸಿರುವ ಆದಾಯ ತೆರಿಗೆ ಅಧಿಕಾರಿಗಳು, ಅಪಾರ ಪ್ರಮಾಣದ ನಗದನ್ನು ವಶಪಡಿಸಿಕೊಂಡಿದ್ದಾರೆ.
ಇದರಿಂದಾಗಿ ಕಾಂಗ್ರೆಸ್ ತೀವ್ರ ಟೀಕೆಗೆ ಗುರಿಯಾಗಿದೆ. ಈ ಕುರಿತು ಹೇಳಿಕೆ ಕೊಟ್ಟಿರುವ ಜಾರ್ಖಂಡ್ ಕಾಂಗ್ರೆಸ್‌ನ ಹಂಗಾಮಿ ಅಧ್ಯಕ್ಷ ಅವಿನಾಶ್ ಪಾಂಡೆ, 'ಇದು ಧೀರಜ್ ಸಾಹು ಅವರ ವೈಯಕ್ತಿಕ ವಿಚಾರ. ಪಕ್ಷಕ್ಕೂ ಅದಕ್ಕೂ ಯಾವುದೇ ಸಂಬಂಧವಿಲ್ಲ. ದಾಖಲೆಯಿಲ್ಲದ ಹಣಕ್ಕೆ ಸಂಬಂಧಿಸಿದಂತೆ ಸಾಹು ಅವರಿಂದ ಸ್ಪಷ್ಟನೆ ಕೇಳುತ್ತೇವೆ' ಎಂದು ಹೇಳಿದ್ದಾರೆ.
ಸಾಹು ಕಾಂಗ್ರೆಸ್ ಸಂಸದರಾಗಿರುವುದರಿಂದ ಇಷ್ಟು ದೊಡ್ಡ ಮೊತ್ತ ಹೇಗೆ ಬಂತು ಎಂಬುದರ ಕುರಿತು ಅಧಿಕೃತ ಹೇಳಿಕೆ ನೀಡಬೇಕು ಎಂದು ಅವರು ರಾಂಚಿಯ ಬಿರ್ಸಾ ಮುಂಡಾ ವಿಮಾನ ನಿಲ್ದಾಣದಲ್ಲಿ ಹೇಳಿದ್ದಾರೆ.
ಕಾಂಗ್ರೆಸ್ ತನ್ನ ನಿಲುವಿನಲ್ಲಿ ಬದ್ಧವಾಗಿದೆ. ದಾಳಿಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಹಾಗಿದ್ದರೂ ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಸಿ ಆರೋಪ ಬರುತ್ತಿರುವುದು ದುರದೃಷ್ಟಕರ ಎಂದು ಹೇಳಿದರು.
ಕುಟುಂಬವೊಂದು 100 ವರ್ಷಕ್ಕೂ ಹೆಚ್ಚು ವರ್ಷಗಳಿಂದ ಉದ್ಯಮ ನಡೆಸಿಕೊಂಡು ಬರುತ್ತಿದೆ. ಅವಿಭಕ್ತ ಕುಟುಂಬದ ವ್ಯವಹಾರ ಇದಾಗಿದೆ. ಧೀರಜ್ ಇದರ ಭಾಗವಾಗಿದ್ದಾರೆ. ಆದರೂ ಇಷ್ಟು ದೊಡ್ಡ ಮೊತ್ತ ಎಲ್ಲಿಂದ ಬಂತು ಎಂಬುದನ್ನು ಸಾಹು ಸ್ಪಷ್ಟಪಡಿಸಬೇಕು ಎಂದು ಅವರು ಹೇಳಿದರು.
ಆದಾಯ ತೆರಿಗೆ ಇಲಾಖೆಯೂ ಸಹ ಈ ಕುರಿತು ಅಧಿಕೃತ ಹೇಳಿಕೆ ನೀಡಬೇಕು ಎಂದು ಅವರು ಬಯಸಿದರು.
ತೆರಿಗೆ ವಂಚನೆ ಪ್ರಕರಣ ಸಂಬಂಧ ಒಡಿಶಾ ಮೂಲದ ಬೌದ್ ಡಿಸ್ಟಿಲರಿ ಪ್ರೈವೇಟ್ ಲಿಮಿಟೆಡ್‌ನ ವಿವಿಧ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಜಪ್ತಿ ಮಾಡಿರುವ ಹಣ ₹290 ಕೋಟಿಗೆ ಏರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್‌ನ ರಾಜ್ಯಸಭೆ ಸದಸ್ಯ, ಜಾರ್ಖಂಡ್‌ನ ಧೀರಜ್ ಪ್ರಸಾದ್ ಸಾಹು ಅವರಿಗೆ ಸೇರಿದ ಸ್ಥಳದಲ್ಲೂ ದಾಳಿ ನಡೆದಿದೆ. ಅಧಿಕಾರಿಗಳ ಪ್ರಕಾರ, ಒಂದು ನಿರ್ದಿಷ್ಟ ಕಾರ್ಯಾಚರಣೆಯಲ್ಲಿ ಜಪ್ತಿ ಮಾಡಿರುವ ಅತ್ಯಧಿಕ ಮೊತ್ತದ 'ಕಪ್ಪುಹಣ' ಇದಾಗಿದೆ.