ನವದೆಹಲಿ: ಜಗತ್ತಿನಾದ್ಯಂತ ಕೋವಿಡ್ ವೈರಾಣುವಿನ ರೂಪಾಂತರಿ ಜೆಎನ್1 ಸೋಂಕು ವ್ಯಾಪಿಸುತ್ತಿದೆ.
ಈ ಬಗ್ಗೆ ಅಪೋಲೋ ಆಸ್ಪತ್ರೆಯ ಶ್ವಾಸಕೋಶದ ವಿಭಾಗದ ಹಿರಿಯ ವೈದ್ಯರಾಗಿರುವ ಡಾ. ರಾಜೇಶ್ ಚಾವ್ಲಾ, ಜೆಎನ್1 ಸೋಂಕು ವೇಗವಾಗಿ ಹರಡುತ್ತಿದೆ. ಬೇರೆ ರೂಪಾಂತರಿಗಳನ್ನು ಹಿಂದಿಕ್ಕಿ ಜೆಎನ್1 ಎಲ್ಲೆಡೆ ಹರಡುತ್ತಿದೆ. ಓಮಿಕ್ರಾನ್ ನಂತೆಯೇ ಇದೂ ಸಹ ಸೌಮ್ಯ ರೋಗ ಲಕ್ಷಣಗಳನ್ನು ಹೊಂದಿದೆ. ಹಲವು ಸೋಂಕಿತರಿಗೆ ತೀವ್ರವಾದ ರೋಗಲಕ್ಷಣಗಳಲಿಲ್ಲ ಕೆಲವರಿಗೆ ಮಾತ್ರ ತೀವ್ರವಾದ ರೋಗಲಕ್ಷಣಗಳಿವೆ. ಇದರ ಲಕ್ಷಣಗಳು, ಶೀತ, ಕೆಮ್ಮು, ಆಯಾಸ, ಗಂಟಲು ನೋವು ಮತ್ತು ಧ್ವನಿ ಗಟ್ಟಿಯಾಗುವುದು, ಕೆಲವು ಜನರಿಗೆ ಅತಿಸಾರ ಕಾಣಿಸಿಕೊಳ್ಳಬಹುದು ಎಂದು ಹೇಳಿದ್ದಾರೆ.
"ಇದರ ವಿರುದ್ಧದ ದೊಡ್ಡ ಮುನ್ನೆಚ್ಚರಿಕೆ ಎಂದರೆ ನೀವು ರೋಗಲಕ್ಷಣಗಳನ್ನು ಹೊಂದಿದ್ದರೆ, ವಿಶೇಷವಾಗಿ ನೀವು ಒಂದಕ್ಕಿಂತ ಹೆಚ್ಚು ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದರೆ, ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು, ಆರ್ ಟಿ-ಪಿಸಿಆರ್ ಪರೀಕ್ಷೆಯು ಇದಕ್ಕೆ ಇನ್ನೂ ಉತ್ತಮವಾಗಿದೆ. ತುಂಬಾ ಸೌಮ್ಯ ರೋಗಲಕ್ಷಣಗಳನ್ನು ಹೊಂದಿರುವ ಜನರನ್ನು ಈ ಪರೀಕ್ಷೆಗೆ ಒಳಪಡಲು ನಾನು ಶಿಫಾರಸು ಮಾಡುವುದಿಲ್ಲ, ಆದರೆ ಒಂದಕ್ಕಿಂತ ಹೆಚ್ಚು ಆರೋಗ್ಯ ಸಮಸ್ಯೆಗಳಿದ್ದವರು ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು ”ಎಂದು ಅವರು ಹೇಳಿದರು.
ಕೋವಿಡ್ ಗೆ ಅತ್ಯುತ್ತಮ ಮದ್ದು ಏನೆಂದರೆ ವಿಶ್ರಾಂತಿ ಪಡೆಯುವುದಾಗಿದೆ. ಅಲ್ಲದೆ, ಹೆಚ್ಚು ನೀರು ಕುಡಿಯಿರಿ ಮತ್ತು ನೀವು ತಣ್ಣನೆಯ ಪ್ರದೇಶದಲ್ಲಿ ವಾಸಿಸುತ್ತಿದ್ದರೆ ಬಿಸಿ ಸೂಪ್ ಮತ್ತು ದ್ರವ ಆಹಾರಗಳನ್ನು ತೆಗೆದುಕೊಳ್ಳಬಹುದಾಗಿದೆ.
ನಿಮ್ಮ ವೈದ್ಯರನ್ನು ಸಂಪರ್ಕಿಸಿದ ನಂತರ ನೀವು ಔಷಧಿಗಳನ್ನು ತೆಗೆದುಕೊಳ್ಳಬಹುದು, ಇದರಲ್ಲಿ ನೀವು ಹೊಂದಿರುವ ರೋಗಲಕ್ಷಣಗಳನ್ನು ಅವಲಂಬಿಸಿ ಆಂಟಿಹಿಸ್ಟಮೈನ್‌ಗಳು ಅಥವಾ ಪ್ಯಾರೆಸಿಟಮಾಲ್ ನ್ನು ಸೂಚಿಸಲಾಗುತ್ತದೆ. ಬಹುತೇಕ ಎಲ್ಲಾ ರೋಗಿಗಳನ್ನು ವಿಶ್ರಾಂತಿ ಪಡೆಯುವುದು ಹಾಗೂ ಹೆಚ್ಚಿನ ದ್ರವ ಆಹಾರಗಳನ್ನು ಸೇವಿಸುವುದರಿಂದ ಕೋವಿಡ್ ಸೋಂಕನ್ನು ಗುಣಪಡಿಸಬಹುದು." ಎಂದು ತಿಳಿಸಿದ್ದಾರೆ.
ಒಬ್ಬ ವ್ಯಕ್ತಿಗೆ ಸೋಂಕು ತಗುಲಿದರೆ, ಆತ 5 ದಿನಗಳವರೆಗೆ ತನ್ನನ್ನು ತಾನು ಪ್ರತ್ಯೇಕಿಸಿಕೊಳ್ಳಬೇಕು ಮತ್ತು ಅವನ ಸುತ್ತಲಿನ ಜನರು ಕೈ ತೊಳೆಯುವುದು, ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತಹ ಹಿಂದಿನ ಕ್ರಮಗಳನ್ನು ಅನುಸರಿಸಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.