ಲಖನೌ: ಗುಟ್ಕಾ ಕಂಪನಿಗಳಿಗೆ ಜಾಹೀರಾತು ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಅಕ್ಷಯ್ ಕುಮಾರ್, ಶಾರುಖ್ ಖಾನ್ ಮತ್ತು ಅಜಯ್ ದೇವಗನ್ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಈ ಕುರಿತು ನ್ಯಾಯಾಂಗ ನಿಂದನೆ ಅರ್ಜಿಗೆ ಪ್ರತಿಕ್ರಿಯಿಸಿದ ಕೇಂದ್ರ ಸರ್ಕಾರವು ಅಲಹಾಬಾದ್ ನ್ಯಾಯಾಲಯದ ಲಖನೌ ಪೀಠಕ್ಕೆ ತಿಳಿಸಿದೆ.
ಇದೇ ವಿಷಯವನ್ನು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಸುತ್ತಿದ್ದು, ತ್ವರಿತ ಅರ್ಜಿಯನ್ನು ವಜಾಗೊಳಿಸಬೇಕು ಎಂದು ಕೇಂದ್ರದ ವಕೀಲರು ಶುಕ್ರವಾರ ಹೈಕೋರ್ಟ್‌ಗೆ ತಿಳಿಸಿದ್ದು, ಪೀಠವು ವಿಚಾರಣೆಯನ್ನು 2024ತ ಮೇ 9 ಕ್ಕೆ ಮುಂದೂಡಿದೆ.
ನ್ಯಾಯಮೂರ್ತಿ ರಾಜೇಶ್ ಸಿಂಗ್ ಚೌಹಾಣ್ ಅವರ ಪೀಠವು, ಈ ನಟರು ಉನ್ನತ ಮಟ್ಟದ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಆದರೆ, ಗುಟ್ಕಾ ಕಂಪನಿಗಳಿಗೆ ಜಾಹೀರಾತುಗಳನ್ನು ಮಾಡುತ್ತಿದ್ದಾರೆ . ಹೀಗಾಗಿ, ನಟರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದ ಅರ್ಜಿದಾರರ ಪ್ರಾತಿನಿಧ್ಯವನ್ನು ನಿರ್ಧರಿಸಲು ಸೆಪ್ಟೆಂಬರ್ 2022ರಲ್ಲಿ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿತ್ತು.
ಅಕ್ಟೋಬರ್ 22 ರಂದು ಸರ್ಕಾರಕ್ಕೆ ಪ್ರಾತಿನಿಧ್ಯವನ್ನು ನೀಡಲಾಯಿತು. ಆದರೆ ಈ ವಿಷಯದಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅರ್ಜಿದಾರರು ವಾದಿಸಿದರು. ನಂತರ, ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಕೇಂದ್ರ ಸರ್ಕಾರದ ಕ್ಯಾಬಿನೆಟ್ ಕಾರ್ಯದರ್ಶಿಗೆ ನೋಟಿಸ್ ಜಾರಿ ಮಾಡಿತ್ತು.
ಬಳಿಕ, ಡೆಪ್ಯುಟಿ ಸಾಲಿಸಿಟರ್ ಜನರಲ್ ಎಸ್.ಬಿ ಪಾಂಡೆ ಅವರು ಅಕ್ಷಯ್ ಕುಮಾರ್, ಶಾರುಖ್ ಖಾನ್ ಮತ್ತು ಅಜಯ್ ದೇವಗನ್ ಅವರಿಗೆ ಕೇಂದ್ರವು ಶೋಕಾಸ್ ನೋಟಿಸ್ ಜಾರಿ ಮಾಡಿದೆ ಎಂದು ಹೈಕೋರ್ಟ್‌ಗೆ ತಿಳಿಸಿದರು.