ತಿರುವನಂತಪುರಂ: ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಗಣೇಶ್ ಕುಮಾರ್ ಮತ್ತು ರಾಮಚಂದ್ರನ್ ಕಡನ್ನಪ್ಪಳ್ಳಿ ಅವರಿಗೆ ನೀಡಿರುವ ಖಾತೆಗಳನ್ನು ಹಂಚಲಾಗಿದ್ದು, ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅನುಮೋದನೆ ನೀಡಿದ್ದಾರೆ.
ಗಣೇಶ್ ಕುಮಾರ್ ಅವರಿಗೆ ಸಾರಿಗೆ, ಮೋಟಾರು ವಾಹನ ಮತ್ತು ಜಲಸಾರಿಗೆ ಖಾತೆಗಳನ್ನು ನೀಡಲಾಗಿದ್ದು, ರಾಮಚಂದ್ರನ್ ಕಡನ್ನಪ್ಪಳ್ಳಿಯವರಿಗೆ ನೋಂದಣಿ, ವಸ್ತುಸಂಗ್ರಹಾಲಯಗಳು ಮತ್ತು ಪುರಾತತ್ವ ಖಾತೆಗಳನ್ನು ನೀಡಲಾಗಿದೆ. ಇವರಿಗೆ ಬಂದರು ಇಲಾಖೆ ಕೊಡುತ್ತಾರೆ ಎಂದು ಭಾವಿಸಲಾಗಿತ್ತಾದರೂ ವಿ.ಎನ್.ವಾಸವನ್ ಅವರಿಗೆ ನೀಡಲಾಗಿದೆ.ಸಹಕಾರ ಇಲಾಖೆ ಅಲ್ಲದೆ ಬಂದರು ಇಲಾಖೆಯೂ ವಾಸವನ್ ಅವರ ತೆಕ್ಕೆಗೆ ಸೇರಿದೆ.
ಯಾವುದೇ ಇಲಾಖೆ ಬಂದರೂ ಪ್ರಾಮಾಣಿಕವಾಗಿ ವ್ಯವಹರಿಸುತ್ತೇನೆ ಎಂದು ಪ್ರತಿಕ್ರಿಯಿಸಿದ ಕೆ.ಬಿ.ಗಣೇಶ್ ಕುಮಾರ್, ಯಾವುದೇ ಇಲಾಖೆ ಇರಲಿ ನ್ಯಾಯಯುತವಾಗಿ ನಡೆದುಕೊಳ್ಳುತ್ತೇನೆ. ಮುಖ್ಯಮಂತ್ರಿ ಯಾವ ಇಲಾಖೆ ಕೊಟ್ಟರೂ ಅದಕ್ಕೆ ನಿಷ್ಠೆ, ಪ್ರಾಮಾಣಿಕನಾಗಿ ಇರುತ್ತೇನೆ ಎಂದು ಕಡನ್ನಪ್ಪಳ್ಳಿ ರಾಮಚಂದ್ರನ್ ಕೂಡಾ ಹೇಳಿದರು.
ಕೆಎಸ್‍ಆರ್‍ಟಿಸಿಗೆ ಲಾಭವಾಗದಿದ್ದರೂ ಸದ್ಯದ ಪರಿಸ್ಥಿತಿಯಿಂದ ಹೊರಬರಲು ಶಕ್ತಿಮೀರಿ ಪ್ರಯತ್ನಿಸುತ್ತೇವೆ ಎಂದು ಕೆ.ಬಿ.ಗಣೇಶ್ ಕುಮಾರ್ ಹೇಳಿದ್ದಾರೆ. ಸುಧಾರಣೆಗಳನ್ನು ವೇಗಗೊಳಿಸಲು ಪ್ರಯತ್ನಿಸಲಾಗುವುದು ಎಂದಿರುವರು.
ಇನ್ನು ಎರಡೂವರೆ ವರ್ಷ ಬಾಕಿ ಇದೆ. ಎಲ್ಲವನ್ನೂ ಕಲಿಯಲು ಒಂದು ವಾರ ಬೇಕು, ಗಣಕೀಕರಣ ಸೇರಿದಂತೆ ಎಲ್ಲಾ ವಿಭಾಗಗಳನ್ನೂ ಅನುಷ್ಠಾನಗೊಳಿಸಲಾಗುವುದು ಎಂದು ಗಣೇಶ್ ಕುಮಾರ್ ತಿಳಿಸಿದರು.
ಅಧಿಕಾರಿಗಳಿಗೆ ಕಿರುಕುಳ ನೀಡುವುದಿಲ್ಲ.ಪ್ರತಿಪಕ್ಷಗಳ ಬಹಿಷ್ಕಾರದ ನೀತಿ ಏಕೆ ಎಂಬುದು ಅರ್ಥವಾಗುತ್ತಿಲ್ಲ. ಕಾಂಗ್ರೆಸ್ ನವರು ಸುಳ್ಳು ಸಾಕ್ಷಿ ನೀಡಿದ ಪ್ರಕರಣ ಕೋರ್ಟ್ ನಲ್ಲಿದೆ ಎಂದು ಗಣೇಶ್ ಕುಮಾರ್ ಹೇಳಿದರು.