ಭೋಪಾಲ್: ಉಜ್ಜೈನಿ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಮೋಹನ್ ಯಾದವ್ (58) ಅವರು ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಇಂದು (ಬುಧವಾರ) ಪ್ರಮಾಣ ವಚನ ಸ್ವೀಕರಿಸಿದರು.
ಇಲ್ಲಿನ ಲಾಲ್ ಪರೇಡ್ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಯಾದವ್ ಅವರಿಗೆ ರಾಜ್ಯಪಾಲ ಮಂಗುಭಾಯ್ ಪಟೇಲ್ ಅವರು ಪ್ರಮಾಣ ವಚನ ಬೋಧಿಸಿದರು.
ಶಾಸಕರಾದ ರಾಜೇಂದ್ರ ಶುಕ್ಲಾ, ಜಗದೀಶ್ ದೇವ್ಡಾ ಅವರು ಉಪ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಕಳೆದ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಶಿವರಾಜ್ ಸಿಂಗ್ ಚೌಹಾಣ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ, ಉತ್ತರಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಭಾರಿ ಬಹುಮತ
230 ಸದಸ್ಯ ಬಲದ ಮಧ್ಯಪ್ರದೇಶ ವಿಧಾನಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ 163 ಸ್ಥಾನಗಳಲ್ಲಿ ಜಯ ಗಳಿಸಿರುವ ಬಿಜೆಪಿ, ಭಾರಿ ಬಹುಮತದೊಂದಿಗೆ ಅಧಿಕಾರ ಉಳಿಸಿಕೊಂಡಿದೆ. ಕಾಂಗ್ರೆಸ್ 66 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.
ಡಿಸೆಂಬರ್ 11ರಂದು ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯು, 58 ವರ್ಷದ ಯಾದವ್ ಅವರನ್ನು ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಮಾಡಿತು.
ಯಾದವ್ ಅವರು 2013ರಲ್ಲಿ ಮೊದಲ ಬಾರಿಗೆ ಉಜ್ಜೈನಿ ದಕ್ಷಿಣ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದರು. 2018 ಮತ್ತು 2023ರಲ್ಲಿಯೂ ವಿಧಾನಸಭೆ ಪ್ರವೇಶಿಸುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.