ನವದೆಹಲಿ: ಖುದ್ದು ₹1.38 ಲಕ್ಷ ದೇಣಿಗೆ ನೀಡುವ ಮೂಲಕ ಕಾಂಗ್ರೆಸ್‌ನ 'ಡೊನೇಟ್ ಫಾರ್ ದೇಶ್' (ದೇಶಕ್ಕಾಗಿ ದೇಣಿಗೆ) ಕಾರ್ಯಕ್ರಮಕ್ಕೆ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಇಲ್ಲಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, 'ನೀವು ಶ್ರೀಮಂತರಿಂದ ಮಾತ್ರ ದೇಣಿಗೆ ಸಂಗ್ರಹಿಸಿದರೆ, ಅವರ ಪರವಾಗಿ ಯೋಜನೆಗಳನ್ನು ರೂಪಿಸಬೇಕಾಗುತ್ತದೆ.
ಜನ ಸಾಮಾನ್ಯರ ಸಹಾಯದಿಂದ ದೇಶವನ್ನು ಕಟ್ಟಲು ಈ ಅಭಿಯಾನದಿಂದ ಸಾಧ್ಯವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
'ಇದು ಅಭಿಯಾನಕ್ಕಿಂತ ಹೆಚ್ಚಿನದು. ಇದು ಶೋಷಿತ ಸಮುದಾಯಗಳ ಹಕ್ಕುಗಳನ್ನು ಎತ್ತಿಹಿಡಿಯುವ ಬದ್ಧತೆಯಾಗಿದೆ, ಅಸಮಾನತೆಗಳನ್ನು ನಿವಾರಿಸಲು ಮತ್ತು ಶ್ರೀಮಂತರಿಗೆ ಒಲವು ತೋರುವ ಸರ್ಕಾರದ ವಿರುದ್ಧ ತೋರುವ ವಿರೋಧವಾಗಿದೆ ಇದು. ನಾವು ನಿರುದ್ಯೋಗ ಹಾಗೂ ಬೆಲೆ ಏರಿಕೆ ವಿರುದ್ಧ ಹೋರಾಟ ಮಾಡುತ್ತಿದ್ದೇವೆ' ಎಂದು ಕಾಂಗ್ರೆಸ್ ಕೋಶಾಧಿಕಾರಿ ಅಜಯ್ ಮಾಕೇನ್ ಹೇಳಿದರು.
ಡಿ.28ಕ್ಕೆ ಕಾಂಗ್ರೆಸ್ ಪಕ್ಷಕ್ಕೆ 138 ವರ್ಷ ತುಂಬಲಿದ್ದು, ಹೀಗಾಗಿ ₹138, ₹1,380, ₹13,800 ಅಥವಾ ಅದಕ್ಕಿಂತ ಹೆಚ್ಚು ದೇಣಿಗೆ ನೀಡಿ ಎಂದು ಕಾಂಗ್ರೆಸ್ ಜನರಲ್ಲಿ ವಿನಂತಿಸಿಕೊಂಡಿದೆ.
ರಾಜ್ಯಮಟ್ಟದ ನಾಯಕರು, ಚುನಾಯಿತ ಪ್ರತಿನಿಧಿಗಳು, ಪಿಸಿಸಿ ಅಧ್ಯಕ್ಷರು ಹಾಗೂ ಎಐಸಿಸಿ ಪದಾಧಿಕಾರಿಗಳು ಕನಿಷ್ಠ ₹1,380 ದೇಣಿಗೆ ನೀಡಬೇಕು ಎಂದು ಕಾಂಗ್ರೆಸ್ ಸೂಚಿಸಿದೆ.
ಡಿ.28ರವರೆಗೆ ಈ ಅಭಿಯಾನ ಆನ್‌ಲೈನ್ ಮೂಲಕ ಇರಲಿದ್ದು, ಬಳಿಕ ಪಕ್ಷದ ಸದಸ್ಯರು ಮನೆ ಮನೆಗೆ ತೆರಳಿ ದೇಣಿಗೆ ಸಂಗ್ರಹಿಸಲಿದ್ದಾರೆ.
ದೇಣಿಗೆ www.donateinc.in ಹಾಗೂ www.inc.in ಆನ್‌ಲೈನ್ ಚಾನಲ್ ಕಾಂಗ್ರೆಸ್ ಬಿಡುಗಡೆ ಮಾಡಿದೆ.