ಅಹಮದಾಬಾದ್: ಜನವರಿ 22ರಂದು ಅಯೋಧ್ಯೆ ರಾಮಮಂದಿರದಲ್ಲಿ ರಾಮ ಮೂರ್ತಿ ಪ್ರತಿಷ್ಠಾಪನೆ ಆಗುತ್ತಿರುವುದು ಮತ್ತು ದೇಶದ ಅಮೃತ ಕಾಲ ಆರಂಭ ಆಗಿರುವುದು ಕೇವಲ ಕಾಕತಾಳೀಯ ಅಲ್ಲ. ಬದಲಾಗಿ, ದೇಶವು ಮುಂದಿನ 25 ವರ್ಷಗಳಲ್ಲಿ ಜಾಗತಿಕ ಮಟ್ಟದಲ್ಲಿ ಪ್ರಧಾನ ಸ್ಥಾನ ಪಡೆಯುತ್ತದೆ ಎಂಬುದರ ಸೂಚನೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶನಿವಾರ ಹೇಳಿದರು.
'ಇಲ್ಲಿಯ ಸ್ವಾಮಿನಾರಾಯಣ್ ಗುರುಕುಲ ವಿಶ್ವವಿದ್ಯಾಪೀಠ ಪ್ರತಿಷ್ಠಾನಂ ಆಯೋಜಿಸಿದ್ದ ಶ್ರೀ ಪುರಾನಿ ಸ್ವಾಮಿ ಸ್ಮೃತಿ ಮಹೋತ್ಸವ ಕಾರ್ಯಕ್ರಮದಲ್ಲಿ' ಅವರು ಮಾತನಾಡಿದರು. ಶ್ರೀ ರಾಮನ ಜನ್ಮಸ್ಥಳವಾದ ಅಯೋಧ್ಯೆಯಲ್ಲಿದ್ದ ರಾಮಮಂದಿರವನ್ನು ಸುಮಾರು 550 ವರ್ಷಗಳ ಕೆಳಗೆ ಕೆಡವಲಾಗಿತ್ತು. ಇಲ್ಲಿಯವರೆಗೂ ಅದನ್ನು ಮರು ನಿರ್ಮಿಸಲು ಸಾಧ್ಯವಾಗಿರಲಿಲ್ಲ ಎಂದರು.
'ರಾಮಮಂದಿರ ನಿರ್ಮಾಣ ಮೊಕದ್ದಮೆಗೆ ಸಂಬಂಧಿಸಿದ ನ್ಯಾಯಾಲಯ ಪ್ರಕ್ರಿಯೆಗಳನ್ನು ಜಟಿಲಗೊಳಿಸಿ, ನ್ಯಾಯದಾನವನ್ನು ಮುಂದೂಡಲಾಗುತ್ತಿತ್ತು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ರಚನೆಯಾಯಿತು. ಸಂತರ ಆಶೀರ್ವಾದ ಮತ್ತು ಪ್ರೇರಣೆಯಿಂದ ಮಂದಿರ ನಿರ್ಮಾಣದ ಎಲ್ಲಾ ಮಾರ್ಗಗಳೂ ಸಲೀಸಾದವು' ಎಂದರು.
ದೇಶದ ಆತ್ಮವನ್ನು ಎಚ್ಚರಿಸುವ ನಿಟ್ಟಿನಲ್ಲಿ ಮೋದಿ ನಾಯಕತ್ವವು ಕೆಲಸ ಮಾಡಿದೆ ಎಂದು ಅವರು ಹೇಳಿದರು.