ನವದೆಹಲಿ: ಸಂಸತ್ತಿನ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಎಲ್ಲಾ ಆರು ಮಂದಿಯ ಪಾಲಿಗ್ರಾಫ್ ಪರೀಕ್ಷೆಯನ್ನು (ಸುಳ್ಳು ಪತ್ತೆ ಪರೀಕ್ಷೆ) ನಡೆಸಲು ಅನುಮತಿ ಕೋರಿ ದೆಹಲಿ ಪೊಲೀಸರು ಗುರುವಾರ ಇಲ್ಲಿನ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಹರ್ದೀಪ್ ಕೌರ್ ಅವರ ಮುಂದೆ ಅರ್ಜಿ ಸಲ್ಲಿಸಲಾಯಿತು. ಕೆಲವು ಆರೋಪಿಗಳನ್ನು ಪ್ರತಿನಿಧಿಸುವ ವಕೀಲರು ಹಾಜರಾಗಿರಲಿಲ್ಲದ ಕಾರಣ ಅವರು ಜನವರಿ 2ಕ್ಕೆ ಪ್ರಕರಣದ ವಿಚಾರಣೆಯನ್ನು ಮುಂದೂಡಿದರು.
ಅರ್ಜಿ ವಿಚಾರಣೆ ವೇಳೆ ಪೊಲೀಸರು ಆರು ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಆರೋಪಿಗಳಾದ ಮನೋರಂಜನ್ ಡಿ, ಸಾಗರ್ ಶರ್ಮಾ, ಅಮೋಲ್ ಧನರಾಜ್ ಶಿಂಧೆ, ನೀಲಂ ದೇವಿ, ಲಲಿತ್ ಝಾ ಮತ್ತು ಮಹೇಶ್ ಕುಮಾವತ್ ಸದ್ಯ ಜನವರಿ 5 ರವರೆಗೆ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.
ದೆಹಲಿ ಪೊಲೀಸರನ್ನು ಪ್ರತಿನಿಧಿಸಿದ ಪಬ್ಲಿಕ್ ಪ್ರಾಸಿಕ್ಯೂಟರ್ ಅಖಂಡ ಪ್ರತಾಪ್ ಸಿಂಗ್, 'ದಾಳಿಯನ್ನು ಉತ್ತಮವಾಗಿ ಯೋಜಿಸಲಾಗಿದೆ' ಎಂದು ಈ ಹಿಂದೆ ನ್ಯಾಯಾಲಯಕ್ಕೆ ತಿಳಿಸಿದ್ದರು.
'ದಾಳಿಯ ಹಿಂದಿನ ನಿಜವಾದ ಉದ್ದೇಶ' ಮತ್ತು ಅವರು ಯಾವುದೇ ಶತ್ರು ದೇಶ ಅಥವಾ ಭಯೋತ್ಪಾದಕ ಸಂಘಟನೆಗಳೊಂದಿಗೆ ಯಾವುದೇ ಸಂಬಂಧವನ್ನು ಹೊಂದಿದ್ದಾರೆಯೇ ಎಂಬುದರ ಬಗ್ಗೆ ತಿಳಿದುಕೊಳ್ಳಲು ಆರೋಪಿಗಳ ಕಸ್ಟಡಿ ವಿಚಾರಣೆಯ ಅಗತ್ಯವಿದೆ ಎಂದು ಅವರು ನ್ಯಾಯಾಲಯದ ಮುಂದೆ ಹೇಳಿದ್ದರು.
2001ರ ಸಂಸತ್ತಿನ ಭಯೋತ್ಪಾದಕ ದಾಳಿಯನ್ನು ನೆನಪಿಸುವ ಡಿಸೆಂಬರ್ 13 ರಂದು ಲೋಕಸಭೆಯಲ್ಲಿ ಭಾರಿ ಭದ್ರತಾ ಲೋಪವಾಗಿತ್ತು. ಕಲಾಪ ನಡೆಯುತ್ತಿರುವಾಗಲೇ ಸಾಗರ್ ಶರ್ಮಾ ಮತ್ತು ಡಿ ಮನೋರಂಜನ್ ಎಂಬ ಇಬ್ಬರು ಯುವಕರು ಸಂದರ್ಶಕರ ಗ್ಯಾಲರಿಯಿಂದ ಸದನದೊಳಗೆ ಜಿಗಿದು ಘೋಷಣೆಗಳನ್ನು ಕೂಗುತ್ತಾ ‘ಸ್ಮೋಕ್ ಕ್ಯಾನ್’ ಹಾರಿಸಿದ್ದರು. ಇದರಿಂದಾಗಿ, ಸದನದಲ್ಲಿ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು.
ಅದೇ ಸಮಯದಲ್ಲಿ, ಇನ್ನಿಬ್ಬರು ಆರೋಪಿಗಳಾದ ಅಮೋಲ್ ಶಿಂಧೆ ಮತ್ತು ನೀಲಂ ದೇವಿ ಸಂಸತ್ತಿನ ಆವರಣದ ಹೊರಗೆ ಘೋಷಣೆಗಳನ್ನು ಕೂಗುತ್ತಾ, ಬಣ್ಣದ ಹೊಗೆಯನ್ನು ಹಾರಿಸಿದ್ದರು.