ಕೊಚ್ಚಿ: ಹಾದಿಯಾ ಆಗಿ ಬದಲಾಗಿರುವ ಅಖಿಲಾ ಬಂಧನದಲ್ಲಿದ್ದು, ಆಕೆಯನ್ನು ಬಿಡುಗಡೆ ಮಾಡಬೇಕು ಎಂದು ಆಕೆಯ ತಂದೆ ವೈಕಂ ಮೂಲದ ಕೆ.ಎಂ.ಅಶೋಕನ್ ಆಗ್ರಹಿಸಿದ್ದಾರೆ.
12ರಂದು ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನಡೆಸಲಿದೆ ಮಲಪ್ಪುರಂ ನಿವಾಸಿ ಎ.ಎಸ್.ಸೈನಬಾ ಮತ್ತಿತರರ ವಶದಲ್ಲಿ ಪುತ್ರಿ ಇದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ಕಳೆದ ಒಂದು ತಿಂಗಳಿಂದ ಆಕೆಯನ್ನು ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇನೆ, ಆದರೆ ಪೋನ್ ಸ್ವೀಕರಿಸುತ್ತಿಲ್ಲ. ಆಗಾಗ ಪೋನ್ ಸ್ವಿಚ್ ಆಫ್ ಮಾಡಲಾಗುತ್ತಿದೆ. ಕ್ಲಿನಿಕ್ ತಲುಪಿದಾಗ ಅದು ಮುಚ್ಚಿತ್ತು. ಮಗಳು ತಾನು ಮದುವೆಯಾದ ಶಫಿನ್ ಜಹಾನ್ ಜೊತೆ ಯಾವುದೇ ವೈವಾಹಿಕ ಸಂಬಂಧ ಹೊಂದಿಲ್ಲ ಎಂದು ಹೇಳಿರುವುದಾಗಿ ಅರ್ಜಿಯಲ್ಲಿ ತಿಳಿಸಲಾಗಿದೆ.
ಇದೇ ವೇಳೆ ರಾಷ್ಟ್ರೀಯ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಅಖಿಲಾ ತನ್ನ ತಂದೆಯೊಂದಿಗೆ ಬದುಕಲು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ. 'ನಾನು ತಲೆಮರೆಸಿಕೊಂಡಿಲ್ಲ, ನನ್ನ ಪೋನ್ ಸ್ವಿಚ್ ಆಫ್ ಆಗಿಲ್ಲ. ನನ್ನ ವಿವಾಹಕ್ಕೆ ಸಮ್ಮತಿಸದಿದ್ದದ್ದರಿಂದ ನಾನು ಹೊರಟುಬಂದೆ. ಈಗ ನಾನು ಪ್ರೀತಿಸುವ ಇನ್ನೊಬ್ಬ ವ್ಯಕ್ತಿಯನ್ನು ಮದುವೆಯಾಗಿದ್ದೇನೆ. ನಾನು ಮುಸಲ್ಮಾನಳಾಗಿ ಬಾಳುವುದರಲ್ಲಿ ಸಂತೋಷವಿದೆ. ಈ ವಿವಾಹದ ಬಗ್ಗೆ ನನ್ನ ಪೋಷಕರಿಗೂ ತಿಳಿದಿದೆ. ನಾನು ನನ್ನ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮಥ್ರ್ಯವಿರುವ ಮಹಿಳೆ ' ಎಂದು ಅಖಿಲಾ ತಿಳಿಸಿದ್ದಾಳೆ.