ಉಪ್ಪಳ: ಪೈವಳಿಕೆ ಗ್ರಾಮ ಪಂಚಾಯತಿಯಲ್ಲಿ ಕಳೆದ 9 ತಿಂಗಳಿನಿಂದ ಎ.ಇ. ಅಧಿಕಾರಿಯಿಲ್ಲದೆ ಅಭಿವೃದ್ಧಿ ಕೆಲಸ ಮೊಟಕುಗೊಂಡಿದೆ. ಎ.ಇ.(ಸಹಾಯಕ ಅಭಿಯಂತ) ಜಾರಿ ಮಾಡಬೇಕಾದ 10 ಕೋಟಿ 18 ಲಕ್ಷ ರೂ. ಗಳಲ್ಲಿ 48 ಲಕ್ಷ ರೂ. ಮಾತ್ರವೇ ಜಾರಿಗೊಳಿಸಿದ್ದು, ಉಳಿದ ಮೊತ್ತದ ಅಭಿವೃದ್ಧಿ ಕೆಲಸಗಳು ಬಾಕಿ ಉಳಿದುಕೊಂಡಿದೆ. ಎ.ಇ. ಅವರನ್ನು ನೇಮಿಸುವಂತೆ ಹಲವಾರು ಬಾರಿ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತಿ ಸಹಿತ ಸಂಬಂಧಪಟ್ಟ ವಿವಿಧ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಕ್ರಮಕೈಗೊಳ್ಳದ ಹಿನ್ನೆಲೆಯಲ್ಲಿ ಪ್ರತಿಭಟನೆಗೆ ಮುಂದಾಗಿರುವುದಾಗಿ ಪಂಚಾಯಯತಿ ಅಧಿಕೃತರು ತಿಳಿಸಿದ್ದಾರೆ.
ಎ.ಇ. ಯನ್ನು ಕೂಡಲೇ ನೇಮಿಸುವಂತೆ ಆಗ್ರಹಿಸಿ ಪಂಚಾಯತಿ ಸಿಪಿಎಂ ನೇತೃತ್ವದ ಆಡಳಿತ ಸಮಿತಿ ವತಿಯಿಂದ ಕಾಸರಗೋಡು ಪಂಚಾಯತಿ ಜೋಯಿಂಟ್ ಡೈರೆಕ್ಟರ್ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು. ಗ್ರಾಮ ಪಂಚಾಯತಿ ಅಧ್ಯಕ್ಷೆ ಜಯಂತಿ, ಉಪಾಧ್ಯಕ್ಷೆ ಪುಷ್ಪಲಕ್ಷ್ಮೀ, ಸ್ಥಾಯೀ ಸಮಿತಿ ಅಧ್ಯಕ್ಷ ಅಬ್ದುಲ್ ರಜಾಕ್ ಚಿಪ್ಪಾರ್, ಝಡ್.ಎ.ಕಯ್ಯಾರ್ ಮಾತನಾಡಿದರು. ಸದಸ್ಯರಾದ ಶ್ರೀನಿವಾಸ ಭಂಡಾರಿ, ಅಬ್ದುಲ್ಲ ಕೆ, ಸೀತಾರಾಮ ಶೆಟ್ಟಿ, ಸುನಿತಾ ವಲ್ಟಿ ಡಿ'ಸೋಜ, ಅಶೋಕ್ ಭಂಡಾರಿ, ಗೀತಾ, ಮಮತಾ ಎನ್, ಕಮಲಾ ಸಿ, ರಹಮತ್ ನೇತೃತ್ವ ನೀಡಿದರು. ಕೂಡಲೇ ಎ.ಇ.ಯನ್ನು ನೇಮಿಸದಿದ್ದಲ್ಲಿ ಮುಂದೆ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.