ಮುಂಬೈ: 'ನಮ್ಮದೇ ಮಾತುಗಳ ಪ್ರತಿಧ್ವನಿಗೆ ಕಿವಿಯಾಗುವ ಬದಲಿಗೆ, ಇನ್ನೊಬ್ಬರ ಮಾತುಗಳನ್ನು ಕೇಳಿಸಿಕೊಳ್ಳುವ ದಿಟ್ಟತನವನ್ನು ಬೆಳೆಸಿಕೊಳ್ಳಬೇಕು' ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಪುಣೆಯಲ್ಲಿರುವ ಸಿಂಬಿಯಾಸಿಸ್ ಇಂಟರ್‌ನ್ಯಾಷನಲ್ (ಡೀಮ್ಡ್) ವಿಶ್ವವಿದ್ಯಾಲಯದ 20ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
'ಬದುಕಿನ ಪ್ರತಿ ಘಟ್ಟದಲ್ಲಿ ಅನ್ಯರ ಮಾತು ಕೇಳಿಸಿಕೊಳ್ಳುವ ಶಕ್ತಿ ಅಗತ್ಯ. ಇದು, ಅನ್ಯರಿಗೆ ಆ ಸಮಯ ಆವರಿಸುವ ಸ್ವಾತಂತ್ರ್ಯ ನೀಡುತ್ತದೆ. ಆದರೆ, ಈಗ ನಾವು ನಮ್ಮ ಮಾತುಗಳನ್ನಷ್ಟೇ ಕೇಳಿಸಿಕೊಳ್ಳುತ್ತಿದ್ದೇವೆ' ಎಂದು ಹೇಳಿದರು.
'ಕೇಳಿಸಿಕೊಳ್ಳುವ ದಿಟ್ಟತನ ತೋರುವುದು ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡದೇ ಇರಬಹುದು. ಆದರೆ, ಅವುಗಳ ಹುಡುಕಾಟದ ಸಾಧ್ಯತೆಗಳನ್ನು ವಿಸ್ತರಿಸುತ್ತದೆ. ಜೊತೆಗೆ ನಮ್ಮದೇ ಧ್ವನಿ ಆಲಿಸುವ ನಿರಂತರತೆಗೆ ಕಡಿವಾಣ ಹಾಕುತ್ತದೆ. ನಮ್ಮ ಸುತ್ತಲಿನ ಜಗತ್ತನ್ನು ಹೊಸತಾಗಿ ಅರ್ಥಮಾಡಿಕೊಳ್ಳಲು ನೆರವಾಗಲಿದೆ' ಎಂದು ಸಿಜೆಐ ಅಭಿಪ್ರಾಯಪಟ್ಟರು.
'ನಮಗೆ ಪಾಠ ಕಲಿಸುವ ಭಿನ್ನ ಮಾರ್ಗವನ್ನು ಬದುಕು ಹೊಂದಿದೆ. ಬದುಕಿನ ಈ ಪಯಣದಲ್ಲಿ ಮಾನವೀಯತೆ, ಧೈರ್ಯ ಮತ್ತು ಸಮಗ್ರತೆ ನಿಮ್ಮ ಸಂಗಾತಿಯಾಗಿರಲಿ' ಎಂದು ಕಿವಿಮಾತು ಹೇಳಿದರು.
'ಜನರ ಸಾಮಾನ್ಯ ಗ್ರಹಿಕೆಯಂತೆ ಕೋಪ ಪ್ರದರ್ಶಿಸುವುದು, ಹಿಂಸೆಯಲ್ಲಿ ತೊಡಗುವುದು ಅಥವಾ ಅನ್ಯರಿಗೆ ವೃತ್ತಿ ಅಥವಾ ವೈಯಕ್ತಿಕ ಬದುಕಿನಲ್ಲಿ ಅಗೌರವ ತೋರುವುದೇ ನಮ್ಮ ಶಕ್ತಿಯ ಪ್ರದರ್ಶನವಲ್ಲ' ಎಂದರು.
'ಬದುಕಿನಲ್ಲಿ ಎದುರಾಗುವ ವೈರುಧ್ಯಗಳನ್ನು ಎದುರಿಸುವ ಸಾಮರ್ಥ್ಯದ ಪ್ರದರ್ಶನ ಹಾಗೂ ಈ ಮೂಲಕ ಸುತ್ತಲಿನ ಜನರನ್ನು ಮಾನವೀಯವಾಗಿ ನೋಡುವುದರಲ್ಲಿಯೇ ಮನುಷ್ಯನ ನಿಜವಾದ ಶಕ್ತಿ ಅಡಗಿದೆ' ಎಂದು ಹೇಳಿದರು.
'ಯಶಸ್ಸಿನ ಅಳತೆಗೋಲು ಜನಪ್ರಿಯತೆಯಲ್ಲ, ಉನ್ನತ ಉದ್ದೇಶದ ವ್ಯಕ್ತಿಯ ಬದ್ಧತೆಯೇ ಯಶಸ್ಸು. ಆದಷ್ಟು ಸಂಯಮ ಬೆಳೆಸಿಕೊಳ್ಳಬೇಕು. ನನ್ನ ಪೀಳಿಗೆಯ ಜನರು ಯೌವನದಲ್ಲಿದ್ದಾಗ, ಹೆಚ್ಚು ಪ್ರಶ್ನೆ ಕೇಳದಂತೆ ವಿವೇಕ ಹೇಳಲಾಗುತ್ತಿತ್ತು. ಈಗ ಆ ಸ್ಥಿತಿ ಇಲ್ಲ. ಪ್ರಶ್ನೆ ಕೇಳಿ ಅನುಮಾನ ಬಗೆಹರಿಸಿಕೊಳ್ಳಲು ಹಿಂಜರಿಯುವುದಿಲ್ಲ' ಎಂದರು.
ಇದಕ್ಕೆ ಉದಾಹರಣೆಯಾಗಿ ಯುವತಿಯೊಬ್ಬರು ಬಡಾವಣೆಯಲ್ಲಿನ ರಸ್ತೆಗಳ ಕಳಪೆ ಸ್ಥಿತಿ ಕುರಿತು ರೀಲ್ಸ್ ಮಾಡಿ ಗಮನ ಸೆಳೆದಿದ್ದನ್ನು ಸಿಜೆಐ ಉಲ್ಲೇಖಿಸಿದರು. ರೀಲ್ಸ್ ನೋಡಿದಾಗ ನನಗೆ ಸಾವಿತ್ರಿಭಾಯಿ ಫುಲೆ ನೆನಪಾದರು ಎಂದರು.