ಕೊಚ್ಚಿ: ಶಬರಿಮಲೆಯಲ್ಲಿ 18ನೇ ಮೆಟ್ಟಿಲ ಮೇಲೆ ಹೈಡ್ರಾಲಿಕ್ ಮೇಲ್ಛಾವಣಿ ಅಳವಡಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.
ಇದರ ವಿರುದ್ಧ ದೂರುಗಳು ಬಂದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಕ್ರಮ ಕೈಗೊಂಡಿದೆ. ಈ ಕುರಿತು ವಿಭಾಗೀಯ ಪೀಠವು ದೇವಸ್ವಂ ಮಂಡಳಿ ಮತ್ತು ಸರ್ಕಾರದಿಂದ ವಿವರಣೆ ಕೇಳಿದೆ.
ಮಳೆ ಮತ್ತು ಗಾಳಿಯ ವಾತಾವರಣದಲ್ಲಿ ಪಡಿಪೂಜೆ ನೆರವೇರಿಸಲು ಪ್ರಾಯೋಗಿಕವಾಗಿ ತೊಂದರೆಯಾಗುವ ಕಾರಣ ಹದಿನೆಂಟನೇ ಮೆಟ್ಟಿಲ ಮೇಲೆ ತಾತ್ಕಾಲಿಕ ಹೈಡ್ರಾಲಿಕ್ ಮೇಲ್ಛಾವಣಿಯನ್ನು ಅಳವಡಿಸಲಾಗಿದೆ ಎಂದು ತಿರುವಾಂಕೂರು ದೇವಸ್ವಂ ಮಂಡಳಿ ನೀಡಿದ ವಿವರಣೆ. ಭಾರೀ ಮಳೆಯ ಸಂದರ್ಭದಲ್ಲಿ ಯಾತ್ರಾರ್ಥಿಗಳು ಮೆಟ್ಟಿಲು ಹತ್ತುವಂತಿಲ್ಲ ಎಂದು ದೇವಸ್ವಂ ಮಂಡಳಿ ಹೈಕೋರ್ಟ್‍ಗೆ ತಿಳಿಸಿದೆ. ಈ ವಿಚಾರದಲ್ಲಿ ಸರ್ಕಾರ ನಾಟಕವಾಡುತ್ತಿದೆ. ಸರ್ಕಾರ ವಿವರಣೆಗೆ ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ಪ್ರಕರಣವನ್ನು 19ಕ್ಕೆ ಮುಂದೂಡಲಾಯಿತು.
ಹೈಡ್ರಾಲಿಕ್ ಮೇಲ್ಛಾವಣಿಯ ವಿರುದ್ಧ ಹಲವು ಸಂಘಟನೆಗಳು ಮತ್ತು ಭಕ್ತರು ದೂರು ನೀಡಲು ಮುಂದಾಗಿದ್ದಾರೆ. 18ನೇ ಮೆಟ್ಟಿಲನ್ನು ಮರೆಮಾಚುವ ರೀತಿಯಲ್ಲಿ ಇದನ್ನು ನಿರ್ಮಿಸಲಾಗಿದೆ. ಮೇಲ್ಛಾವಣಿ ನಿರ್ಮಾಣದಿಂದ ದೇವಾಲಯದ ಪ್ರಾಕೃತಿಕ ಸೌಂದರ್ಯ ಹಾಳಾಗುತ್ತದೆ ಎಂಬ ಆರೋಪವೂ ಕೇಳಿಬಂದಿದೆ. 18 ಮೆಟ್ಟಿಲುಗಳ ಎರಡೂ ಬದಿಯಲ್ಲಿ ಕಲ್ಲಿನ ಕಂಬಗಳ ನಿರ್ಮಾಣದ ವಿರುದ್ಧವೂ ಟೀಕೆ ವ್ಯಕ್ತವಾಗುತ್ತಿದೆ.