ನವದೆಹಲಿ: 'ಚುನಾವಣೆಯಲ್ಲಿ ಜಯಿಸುವ ಮುನ್ನ ಜನರ ಮನ ಗೆಲ್ಲುವುದು ಮುಖ್ಯ. ಜನರು ಬುದ್ಧಿವಂತರಾಗಿದ್ದು, ಅವರ ತಿಳಿವಳಿಕೆಯನ್ನು ಲಘುವಾಗಿ ಕಾಣುವುದು ಸರಿಯಲ್ಲ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
'ವಿಕಸಿತ ಭಾರತ ಸಂಕಲ್ಪ ಯಾತ್ರೆ' ಅಂಗವಾಗಿ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳನ್ನು ಉದ್ದೇಶಿಸಿ ಶನಿವಾರ ಮಾತನಾಡಿದ ಅವರು, 'ಊಳಿಗಮಾನ್ಯ ಮನಃಸ್ಥಿತಿಯ ಸರ್ಕಾರ ನಮ್ಮದಲ್ಲ.
'ಮೋದಿ ಗ್ಯಾರಂಟಿ' ಮೇಲೆ ಜನರು ವಿಶ್ವಾಸವಿಟ್ಟಿದ್ದಾರೆ ಎಂಬುದನ್ನು ಐದು ರಾಜ್ಯಗಳ ವಿಧಾನಸಭೆಗೆ ಈಚೆಗೆ ನಡೆದ ಚುನಾವಣೆಯ ಫಲಿತಾಂಶ ಸ್ಪಷ್ಟಪಡಿಸಿದೆ ಎಂದ ಅವರು, 'ನಮ್ಮನ್ನು ವಿರೋಧಿಸುವವರನ್ನು ದೇಶದ ಜನರು ಏಕೆ ನಂಬುವುದಿಲ್ಲ ಎಂಬುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು' ಎಂದರು.
'ಸುಳ್ಳು ಘೋಷಣೆಗಳಿಂದ ಏನನ್ನೂ ಸಾಧಿಸಲು ಆಗದು ಎಂಬುದು ಕೆಲವು ರಾಜಕೀಯ ಪಕ್ಷಗಳಿಗೆ ಅರ್ಥವಾಗುತ್ತಿಲ್ಲ. ಜನರ ನಡುವೆ ಇದ್ದುಕೊಂಡು ಅವರ ಸೇವೆ ಮಾಡುವುದರಿಂದ ಚುನಾವಣೆಗಳನ್ನು ಗೆಲ್ಲಬಹುದೇ ಹೊರತು, ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರ ಕೈಗೊಂಡು ಚುನಾವಣೆ ಗೆಲ್ಲಲು ಸಾಧ್ಯವಿಲ್ಲ' ಎಂದು ವಿರೋಧ ಪಕ್ಷಗಳ ಕಾಲೆಳೆದರು.
'ದಶಕಗಳ ಕಾಲ ದೇಶದಲ್ಲಿ ಆಡಳಿತ ನಡೆಸಿದವರು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರೆ, ಮೋದಿ ಅವರು ಈಗ ನೀಡುತ್ತಿರುವ ಭರವಸೆಗಳು 50 ವರ್ಷಗಳ ಹಿಂದೆಯೇ ಈಡೇರುತ್ತಿದ್ದವು' ಎಂದು ಕಾಂಗ್ರೆಸ್ ಪಕ್ಷವನ್ನು ಕುಟುಕಿದರು.
ಈ ಯಾತ್ರೆ ಆರಂಭವಾದ ಬಳಿಕ ಉಚಿತ ಅಡುಗೆ ಅನಿಲ ಸಂಪರ್ಕ ಯೋಜನೆಯಡಿ ಸುಮಾರು ಒಂದು ಲಕ್ಷ ಹೊಸ ಫಲಾನುಭವಿಗಳನ್ನು ಸೇರಿಸಲಾಗಿದೆ ಎಂದು ಮಾಹಿತಿ ನೀಡಿದರು.
'ಪ್ರತಿಯೊಬ್ಬ ಬಡವನೂ ನನಗೆ ವಿಐಪಿ'
'ಬಡವರು ಮತ್ತು ಅವಕಾಶ ವಂಚಿತರ ಕಾಳಜಿ ವಹಿಸುವುದು ನನ್ನ ಮೊದಲ ಕರ್ತವ್ಯ' ಎಂದ ಪ್ರಧಾನಿ, 'ನಾನು ಬಡವರ ಕಾಳಜಿ ವಹಿಸುವುದು ಮಾತ್ರವಲ್ಲದೆ, ಅವರನ್ನು ಆರಾಧಿಸುತ್ತೇನೆ' ಎಂದರು.
'ಪ್ರತಿಯೊಬ್ಬ ಬಡವನೂ ನನಗೆ ವಿಐಪಿ ಇದ್ದಂತೆ. ಅದೇ ರೀತಿ ಪ್ರತಿಯೊಬ್ಬ ತಾಯಿ, ಮಗಳು, ಸಹೋದರಿ, ರೈತ ಹಾಗೂ ಯುವಕರು ನನಗೆ ಗಣ್ಯ ವ್ಯಕ್ತಿಗಳೇ ಆಗಿದ್ದಾರೆ' ಎಂದು ನುಡಿದರು.