ಮುಳ್ಳೇರಿಯ :ಕೇರಳ ಕರ್ನಾಟಕ ಗಡಿ ಪ್ರದೇಶವಾದ ಮಿಂಚಿ ಪದವಿನ ಪಾಳು ಬಾವಿಯಲ್ಲಿ ಕೇರಳ ಪ್ಲಾಂಟೇಶನ್ ಕಾರ್ಪೊರೇಶನ್ ಗೋದಾಮಿನಲ್ಲಿ ಇಳಿದ ಎಂಡೋಸಲ್ಪಾನ್ ಹೂತಿರುವ ವಿಚಾರದಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ದಕ್ಷಿಣ ಪೀಠದ ನೋಟೀಸ್ ಜಾರಿಗೊಳಿಸಿದ ಹಿನ್ನಲೆಯಲ್ಲಿ ಕರ್ನಾಟಕ ಹಾಗೂ ಕೇರಳ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈಶ್ವರ ಮಂಗಳ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಅಧಿಕಾರಿಗಳು ತಾಲೂಕು ಆರೋಗ್ಯ ಅಧಿಕಾರಿ ಡಾಕ್ಟರ್ ದೀಪಕ್ ರೈ ಇವರಿಂದ ಮಾಹಿತಿಯನ್ನು ಸಂಗ್ರಹಿಸಿದರು. ಮಿಂಚಿ ಪದವು ಭೇಟಿ ನೀಡಿದ ತಂಡ ಮೊದಲಿಗೆ ಕೇರಳ ಪ್ಲಾಂಟೇಶನ್ ಕಾರ್ಪೊರೇಶನ್ ಕಛೇರಿಗೆ ತೆರಳಿ ಮಾಹಿತಿ ಪಡೆಯುವ ಕಾರ್ಯ ಮಾಡಿದೆ. ಬಳಿಕ ಗೋದಾಮಿ ನಲ್ಲಿದ್ದ ಎಂಡೋಸಲ್ಪಾನ್ ಡಬ್ಬಗಳಿಂದ ಮಾದರಿ ಸಂಗ್ರಹ ಪಡೆದುಕೊಂಡಿದ್ದಾರೆ.
ಎಂಡೋ ಸಲ್ಪಾನ್ ಹಾಕಲಾಗಿದೆ ಎನ್ನುವ ಬಾವಿಯ ಪರಿಶೀಲನೆ ನಡೆಸಿ, ಮೇಲ್ಪದರದ ಒಂದು ಅಡಿ ಆಳದಿಂದ ಮಣ್ಣನ್ನು ಸಂಗ್ರಹಿಸಿದರು. ಅಲ್ಲಿಯೇ ಸಮೀಪ ಇರುವ ಕೆರೆಗಳ ನೀರನ್ನು ಪರೀಕ್ಷಾರ್ಥವಾಗಿ ಸಂಗ್ರಹಿಸಿಕೊಂಡರು. ಮಿಂಚಿಪದವು ಸಮೀಪದಲ್ಲಿರುವ ಕೇರಳದ ಭಾಗದ ಆರೋಗ್ಯ ಕೇಂದ್ರಕ್ಕೆ ಬೇಟಿ ಮಾಡಿ ಅಧಿಕಾರಿಗಳಲ್ಲಿ ಮಾಹಿತಿಯನ್ನು ಸಂಗ್ರಹಿಸಿಕೊಂಡಿದ್ದಾರೆ. ಪ್ರಾರಂಭದಿಂದಲೂ ಎಂಡೋಸುರಿಲ್ಪಟ್ಟ ವಿಚಾರದಲ್ಲಿ ಹೋರಾಟಕ್ಕೆ ನಿಂತಿರುವ ಗ್ರಾಮದ ಪ್ರಮುಖರು ತಮ್ಮಲ್ಲಿರುವ ಮಾಹಿತಿಯನ್ನು ಅಧಿಕಾರಿಗಳಿಗೆ ಗಮನಕ್ಕೆ ತಂದರು.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಬೆಂಗಳೂರು ಪ್ರಾದೇಶಿಕ ನಿರ್ದೇಶನಾಲಯದ ಪ್ರಾದೇಶಿಕ ನಿರ್ದೇಶಕ ಜೆ. ಚಂದ್ರಬಾಬು, ಪ್ರಯೋಗಾಲಯ ಸಹಾಯಕ ನಿಖಿಲ್, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಡಾ. ರವಿ ಡಿ. ಆರ್., ಕೇರಳ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹಾಯಕ ಅಧೀಕ್ಷಕ ಆದರ್ಶ ಟಿ. ವಿ. ತಂಡದಲ್ಲಿದ್ದರು.
ಸಿಬ್ಬಂದಿ ಮತ್ತು ಗ್ರಾಮಸ್ಥರ ನಡುವೆ ವಾಕ್ ಸಮರ
ಹಸಿರು ಪೀಠದ ನ್ಯಾಯ ಮಂಡಳಿ ಅಧಿಕಾರಿಗಳ ಉಪಸ್ಥಿತಿಯಲ್ಲಿ ಹೂತು ಹಾಕಿದ ಎಂಡೋ ಬಾವಿಯ ಮೇಲ್ಮೈಯ ಮಣ್ಣನ್ನು ಪರೀಕ್ಷೆಗೆ ಎಂದು ಸಂಗ್ರಹಿಸುತ್ತಿದ್ದ ವೇಳೆಯಲ್ಲಿ ಅಲ್ಲಿ ನಡೆದ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿ ಪರೀಕ್ಷೆಗೆ ಮೇಲ್ಮೈ ಮಣ್ಣನ್ನು ತೆಗೆಯದೆ ಸುಮಾರು ೬೦ ಅಡಿ ಬಾವಿಯ ಮಣ್ಣನ್ನು ತೆಗೆಯಬೇಕು ಎಂದು ಏರು ದನಿಯಲ್ಲಿ ಅಧಿಕಾರಿಯನ್ನು ವಿನಂತಿಸಿದರು. ಆದರೆ ಗ್ರಾಮಸ್ಥರ ಮಾತಿಗೆ ಬೆಲೆಕೊಡದ ಅಧಿಕಾರಿಗಳು ಮೇಲ್ಮೈ ಮಣ್ಣನ್ನು ಸಂಗ್ರಹಿಸಿ ಪ್ಲಾಸ್ಟಿಕ್ ಡಬ್ಬಕ್ಕೆ ಹಾಕಿ ಕೊಂಡು ಹೋದರು.
- ನ್ಯಾಯ ಮಂಡಳಿಯ ಆದೇಶದಂತೆ ಸ್ಥಳಕ್ಕೆ ಭೇಟಿ ನೀಡಿದ್ದೇನೆ. ಪರಿಶೀಲನೆ ನಡೆಸಿ, ಕೆಲವೊಂದು ಮಾಹಿತಿಗಳನ್ನು ಸಂಗ್ರಹಿಸಿದ್ದೇನೆ ಜೊತೆಯಲ್ಲಿ ಮಣ್ಣು ಮತ್ತು ನೀರಿನ ಸಂಪುಲನ್ನು ಪರೀಕ್ಷಾರ್ಥವಾಗಿ ಸಂಗ್ರಹಿಸಲಾಗಿದೆ.
ರಾಷ್ಟ್ರೀಯ ಹಸುರು ನ್ಯಾಯ ಮಂಡಳಿ ದಕ್ಷಿಣ ಪೀಠದ ಅಧಿಕಾರಿ
- ನ್ಯಾಯ ಮಂಡಳಿಯ ಆದೇಶದಂತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದೇವೆ. ಸಮಸ್ಯೆಗೊಳಗಾದ ಹಾಗೂ ಗೇರು ತೋಟದ ಸ್ಥಳದಿಂದ ಮಣ್ಣಿನ ಮಾದರಿ, ನೀರಿನ ಮಾದರಿಗಳನ್ನು ಸಂಗ್ರಹಿಸಿದ್ದೇವೆ. ಸ್ಥಳೀಯ ಆರೋಗ್ಯ ಕೇಂದ್ರಗಳಲ್ಲಿ ಅಧಿಕಾರಿಗಳನ್ನು ಬೇಟಿ ಮಾಡಿ ಮಾತುಕತೆಯನ್ನು ನಡೆಸಿದ್ದೇವೆ.
| ಜೆ. ಚಂದ್ರಬಾಬು