ಕಾಸರಗೋಡು: ಪೋಕ್ಸೋ ಕಾನೂನು ದುರುಪಯೋಗಪಡಿಸಿಕೊಂಡ ತಾಯಿ ಹಾಗೂ ಪುತ್ರಿಯ ವಿರುದ್ಧ ಪೊಲಿಸರು ಕೇಸು ದಾಖಲಿಸಿಕೊಂಡ ಘಟನೆ ತಲಶ್ಯೇರಿಯಲ್ಲಿ ನಡೆದಿದೆ. ತಲಶ್ಯೇರಿ ಎಡಯನ್ನೂರಿನ ಮೆರ್ಸಿಮ್ಯಾಥ್ಯೂ ಹಾಗೂ ಈಕೆ ಪುತ್ರಿ ವೆಳ್ಳರಿಕುಂಡು ನಿವಾಸಿ ಮನೋಜ್ ಎಂಬವರ ಪತ್ನಿ ಬಿಂದು ವಿರುದ್ಧ ತಲಶ್ಯೇರಿ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಮನೋಜ್ ಹಾಗೂ ಬಿಂದು ದಾಂಪತ್ಯದಲ್ಲಿ ವಿರಸ ಉಂಟಾಗಿ ವಿವಾಹ ವಿಚ್ಛೇದನ ಕೋರಿ ತಲಶ್ಯೇರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ಪರಿಶೀಲಿಸಿದ ನ್ಯಾಯಾಲಯ ದಂಪತಿಯ ಪುತ್ರನನ್ನು ತಂದೆ ಮನೋಜ್ ಜತೆ ಕಳುಹಿಸಿಕೊಡುವಂತೆ ಆದೇಶಿಸಿತ್ತು. ಈ ಮಧ್ಯೆ ಪುತ್ರನಿಗೆ ಮನೋಜ್ ಲೈಂಗಿಕ ಕಿರುಕುಳ ನೀಡಿರುವುದಾಗಿ ಮನೋಜ್ ಪತ್ನಿ ಬಿಂದು ನೀಡಿದ ದೂರಿನನ್ವಯ ಮನೋಜ್‍ನನ್ನು ಬಂಧಿಸಿದ್ದರು. ನಂತರ ಪೊಲೀಸರು ನಡೆಸಿದ ತನಿಖೆಯಲ್ಲಿ ಪುತ್ರನನ್ನು ಮನೋಜ್ ಜತೆ ಕಳುಹಿಸುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಬಿಂದು ಮತ್ತು ಆಕೆಯ ತಾಯಿ ಸುಳ್ಳು ಆರೋಪ ಹೊರಿಸಿ ದೂರು ನೀಡಿರುವುದು ತನಿಖೆಯಿಂದ ಬೆಳಕಿಗೆ ಬಂದಿತ್ತು. ಪೋಕ್ಸೋ ಕೇಸು ದುರುಪಯೋಗಪಡಿಸಿಕೊಂಡ ಹಿನ್ನೆಲೆಯಲ್ಲಿ ಬಿಂದು ಹಾಗೂ ಆಕೆಯ ತಾಯಿ ವಿರುದ್ಧ ಕೇಸು ದಾಖಲಿಸುವಂತೆ ನ್ಯಾಯಾಲಯ ನೀಡಿದ ಆದೇಶದನ್ವಯ ಪೊಲಿಸರು ತಾಯಿ ಮತ್ತು ಪುತ್ರಿ ವಿರುದ್ಧ ಕೇಸು ದಾಖಲಿಸಿಕೊಂಡಿದ್ದರು.