ನವದೆಹಲಿ: ಬ್ರಿಟಿಷ್ ಕಾಲದ ಕ್ರಿಮಿನಲ್ ಕಾನೂನುಗಳನ್ನು ಬದಲಿಸುವ ಮೂರು ಮಸೂದೆಗಳನ್ನು ಬುಧವಾರ ಲೋಕಸಭೆಯಲ್ಲಿ ಧ್ವನಿ ಮತದ ಮೂಲಕ ಅಂಗೀಕರಿಸಲಾಗಿದೆ.
ಭಾರತೀಯ ನ್ಯಾಯ(ಎರಡನೇ) ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ(ಎರಡನೇ) ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ(ಎರಡನೇ) ಮಸೂದೆಯನ್ನು ಕಳೆದ ವಾರ ಲೋಕಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಡಿಸಿದ್ದರು.
ಈ ಮಸೂದೆಗಳು ಕ್ರಮವಾಗಿ ಭಾರತೀಯ ದಂಡ ಸಂಹಿತೆ-1860, ಕ್ರಿಮಿನಲ್ ಪ್ರೊಸೀಜರ್ ಆಕ್ಟ್-1898 ಮತ್ತು 1872ರ ಭಾರತೀಯ ಸಾಕ್ಷ್ಯ ಕಾಯಿದೆಗಳನ್ನು ಬದಲಾಯಿಸಿ ಮೂರು ಹೊಸ ಮಸೂದೆ ಮಂಡಿಸಲಾಗಿದೆ.
ಲೋಕಸಭೆಯಲ್ಲಿ ಭಾರತೀಯ ನ್ಯಾಯ(ಎರಡನೇ) ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ(ಎರಡನೇ) ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ(ಎರಡನೇ) ಮಸೂದೆ ಮೇಲಿನ ಚರ್ಚೆಗೆ ಉತ್ತರಿಸಿದ ಅಮಿತ್ ಶಾ, ಮೂರು ಪ್ರಸ್ತಾವಿತ ಕಾನೂನುಗಳು ಭಯೋತ್ಪಾದನೆ, ದೇಶದ್ರೋಹದ ಸ್ಪಷ್ಟ ವ್ಯಾಖ್ಯಾನವನ್ನು ಹೊಂದಿವೆ ಎಂದು ಹೇಳಿದರು.
ಲೋಕಸಭೆಯಲ್ಲಿ ಬಹುಪಾಲು ವಿರೋಧ ಪಕ್ಷಗಳ ಸಂಸದರ ಅನುಪಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಅಸ್ತಿತ್ವದಲ್ಲಿರುವ ಬ್ರಿಟಿಷರ ಕಾಲದ ಕ್ರಿಮಿನಲ್ ಕಾನೂನುಗಳನ್ನು ಬದಲಿಸುವ ಮೂರು ಮಹತ್ವದ ಮಸೂದೆಗಳನ್ನು ಅಂಗೀಕರಿಸಿದೆ.
ಲೋಕಸಭೆಯ ಉಳಿದ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಗೃಹ ಸಚಿವ ಅಮಿತ್ ಶಾ, ಭಾರತೀಯ ದಂಡ ಸಂಹಿತೆಯನ್ನು ಬದಲಿಸುವ ಭಾರತೀಯ ನ್ಯಾಯ ಸಂಹಿತೆ, ಶಿಕ್ಷೆಗಿಂತ ನ್ಯಾಯದ ಮೇಲೆ ಹೆಚ್ಚು ಕೇಂದ್ರೀಕೃತವಾಗಿದೆ ಎಂದು ಹೇಳಿದರು.
ಈ ಮೂರು ಪ್ರಸ್ತಾವಿತ ಕ್ರಿಮಿನಲ್ ಕಾನೂನುಗಳು, ಜನರನ್ನು ವಸಾಹತುಶಾಹಿ ಮನಸ್ಥಿತಿ ಮತ್ತು ಅದರ ಸಂಕೇತಗಳಿಂದ ಮುಕ್ತಗೊಳಿಸುತ್ತದೆ ಎಂದು ಅವರು ಹೇಳಿದರು.