ಕಾಸರಗೋಡು: ಮಹಿಳಾ ಶಕ್ತಿ ರಾಷ್ಟ್ರದ ಶಕ್ತಿಯಾಗಿದ್ದು, ದೇಶದ ಮುಂದಿನ ಜನಾಂಗದ ಭವಿಷ್ಯ ಮಹಿಳೆಯರ ಕೈಯಲ್ಲಿರುವುದಾಗಿ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಅವರು ಮಹಿಳಾ ಸಂಘ ವೇದಿಕೆಯ ಆಶ್ರಯದಲ್ಲಿ ಕಾಸರಗೋಡು ವಿದ್ಯಾನಗರ ಚಿನ್ಮಯ ತೇಜಸ್‍ನಲ್ಲಿ ನಡೆದ ಸ್ತ್ರೀ ಶಕ್ತಿ ಸಂಗಮವನ್ನು ಉದ್ಘಾಟಿಸಿ ಮಾತನಾಡಿದರು.
ರಾಷ್ಟ್ರದ ಶಕ್ತಿಯ ಮೌಲ್ಯಮಾಪನ ನಡೆಸಿದಲ್ಲಿ, ಮಹಿಳಾ ಶಕ್ತಿಯ ಕೊಡುಗೆ ಗಣನೀಯವಾಗಿದೆ. ಮಹಿಳೆಯರು ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡಿದರೂ ಅದರಲ್ಲಿ ಮೊದಲಿಗರಾಗಬೇಕೆಂಬ ಸಂಕಲ್ಪ ತೊಟ್ಟರೆ ನಮ್ಮ ದೇಶವೂ ಬಲಿಷ್ಠವಾಗುತ್ತದೆ. ಇತಿಹಾಸವನ್ನು ವಿಶ್ಲೇಷಿಸಿದಲ್ಲಿ, ರಾಷ್ಟ್ರವು ಸಂಕಷ್ಟ ಎದುರಿದ ಪ್ರತಿಯೊಂದು ಕಾಲಘಟ್ಟದಲ್ಲೂ ಭಾರತೀಯ ಮಹಿಳೆಯರು ಪರಿಹಾರ ಕಂಡುಕೊಳ್ಳುವ ಚಾಕಚಕ್ಯತೆ ಮೆರೆದಿದ್ದಾರೆ. ವಿದೇಶಿ ಶಕ್ತಿಗಳ ವಿರುದ್ಧ ಹೋರಾಡುವಾಗ ವಿಜ್ಞಾನ, ತಂತ್ರಜ್ಞಾನ, ಕ್ರೀಡೆ ಮತ್ತು ಸಾಂಸ್ಕøತಿಕ ಮೌಲ್ಯಗಳ ಮೇಲೆ ಬೆಳಕು ಚೆಲ್ಲಿರುವ ಸ್ವಾವಲಂಬಿ ಭಾರತದಲ್ಲಿ ಮಹಿಳೆಯರ ಉಪಸ್ಥಿತಿಯನ್ನು ಕಾಣಬಹುದಾಗಿದೆ. ಆದ್ದರಿಂದಲೇ ನಮ್ಮ ಪೂರ್ವಜರು ಪ್ರಕೃತಿಯನ್ನು ಹೆಣ್ಣಿನ ರೂಪದಲ್ಲಿ ಕಂಡರು. ಮಹಿಳೆಯರು ತಮ್ಮ ಕರ್ತವ್ಯ ಮತ್ತು ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿದರೆ ಮುಂದಿನ 25 ವರ್ಷಗಳಲ್ಲಿ ಭಾರತವನ್ನು ವಿಶ್ವದ ಮುಂಚೂಣಿಗೆ ತರಲಾಗುವುದು ಎಂದು ಅವರು ಹೇಳಿದರು. ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠೆಗಾಗಿ ಶ್ರಮಿಸುತ್ತಿರುವ ಎಲ್ಲಾ ಶ್ರಮಿಕ ತಾಯಂದಿರನ್ನು ಶೋಭಾ ಕರಂದ್ಲಾಜೆ ಅಭಿನಂದಿಸಿದರು. ಕಾಸರಗೋಡು ಚಿನ್ಮಯ ಮಿಷನ್‍ನ ಬ್ರಹ್ಮಚಾರಿಣಿ ರೋಜಿಶಾ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಸನ್ಮಾನಿಸಲಾಯಿತು. ಜಿಲ್ಲಾ ಸಂಚಾಲಕಿ ಸರಿತಾ ದಿನೇಶ್ ಸ್ವಾಗತಿಸಿದರು. ಸಹ ಸಂಚಾಲಕಿ ಗೀತಾ ಬಾಬುರಾಜ್ ವಂದಿಸಿದರು. ನಂತರ ಹಲವು ವಿಷಯಗಳ ಕುರಿತು ಚರ್ಚೆ ನಡೆಯಿತು.