ಪೆರ್ಲ: ಸಾಯಿ ಟ್ರಸ್ಟ್ ವತಿಯಿಂದ ಎಂಡೋಸಲ್ಫಾನ್ ಸಂತ್ರಸ್ತರ ಕುಟುಂಬಗಳಿಗೆ ಎಣ್ಮಕಜೆಯ ಬಜಕೂಡ್ಲು ಕಾನದಲ್ಲಿ ನಿರ್ಮಿಸಲಾದ 36 ಮನೆಗಳ ಕೀಲಿಗಳನ್ನು ಫಲಾನುಭವಿಗಳಿಗೆ ವಿತರಿಸಲು ಸಾಯಿ ಟ್ರಸ್ಟ್ ರಕ್ಷಾಧಿಕಾರಿ, ವಕೀಲ ಕೆ.ಮಧುಸೂದನನ್ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದರು.
ಜಿಲ್ಲಾಡಳಿತದ ಪರವಾಗಿ ಎಡಿಎಂ ಕೆ.ನವೀನ್ ಬಾಬು ಕೀಲಿಕೈಗಳನ್ನು ಸ್ವೀಕರಿಸಿದರು. ಕೀಲಿಕೈ ಪಡೆದುಕೊಮಡಿರುವ ಬಗೆಗಿನ ದಾಖಲೆಗಳನ್ನು ಜಿಲ್ಲಾಡಳಿತದಿಮದ ಹಸ್ತಾಂತರಿಸಲಾಯಿತು. ಎಣ್ಮಕಜೆ ಸಾಯಿ ಗ್ರಾಮದಲ್ಲಿ ನಿರ್ಮಿಸಿರುವ ಎಲ್ಲಾ ಮನೆಗಳು ಸಂಪೂರ್ಣ ವಾಸಯೋಗ್ಯವಾಗಿದ್ದು, ನಿವೇಶನಕ್ಕೆ ತೆರಳುವ ರಸ್ತೆಗೆ ಡಾಂಬರೀಕರಣ, ಕುಡಿಯುವ ನೀರು ಹಾಗೂ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಮನೆಗಳ ಹಳೇ ಬಾಗಿಲುಗಳನ್ನು ಬದಲಾಯಿಸಿ, ಹೊಸ ಬಾಗಿಲುಗಳೊಂದಿಗೆ ಬದಲಾಯಿಸಲಾಗಿದೆ. ಪ್ರತಿ ಕುಟುಂಬಕ್ಕೆ ಐದು ಸೆಂಟ್ಸ್ ಭೂಮಿ ನೀಡಲಾಗಿದ್ದು, ಮನೆಗಳಿಗೆ 500 ಲೀಟರ್ ನೀರಿನ ಟ್ಯಾಂಕ್ ಅಳವಡಿಸಲಾಗಿದೆ. ಜಲಜೀವನ್ ಮಿಷನ್ ನೀರಿನ ಲಭ್ಯತೆಯನ್ನು ಖಾತ್ರಿಪಡಿಸಿದೆ. ಮನೆಗಳಲ್ಲಿ ಸಿಟ್ ಔಟ್, ಹಾಲ್, ಡಬಲ್ ಬೆಡ್ ರೂಂ, ಅಟ್ಯಾಚ್ಡ್ ಬಾತ್ ರೂಂ, ಕಿಚನ್ ಮತ್ತು ಹೊಗೆರಹಿತ ಒಲೆ ಒಳಗೊಂಡ ವ್ಯವಸ್ಥೆ ಕಲ್ಪಿಸಲಾಗಿದೆ. ಎಂಡೋಸಲ್ಫಾನ್ ಪೀಡಿತರಿಗಾಗಿ ನಿರ್ಮಿಸಿರುವ ಮನೆಗಳು ಇದಾಗಿದ್ದು, ಗಾಲಿಕುರ್ಚಿಯಲ್ಲಿ ತೆರಳುವ ರೀತಿಯಲ್ಲಿ ಪ್ರತಿ ಮನೆಗಳಿಗೆ ಹಾದಿ ಮಾಡಲಾಗಿದೆ ಎಂದು ಕೆ. ಮಧುಸೂದನನ್ ಮಾಹಿತಿ ನೀಡಿದ್ದಾರೆ. ಸಾಯಿ ಟ್ರಸ್ಟ್ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಎಚ್. ಉಷಾ, ಟ್ರಸ್ಟ್ ಉದ್ಯೋಗಿ ಉಣ್ಣಿಕೃಷ್ಣನ್ ಮತ್ತು ಎಂಡೋಸಲ್ಫಾನ್ ಸೆಲ್ ಹೆಡ್ ಕ್ಲರ್ಕ್ ಸಜಿತ್ ಎಸ್ ನಾಯರ್ ಉಪಸ್ಥಿತರಿದ್ದರು.
ನಾಳೆ ಸಭೆ:
ನವೀಕೃತ ಮನೆಗಳ ಕೀಲಿಕೈ ಹಸ್ತಾಂತರದ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಜಿಲ್ಲಾಧಿಕಾರಿ ಡಾ. ಇನ್ಬಾಶೇಖರ್ ಅವರ ಅಧ್ಯಕ್ಷತೆಯಲ್ಲಿ ಡಿ.4ರಂದು ಬೆಳಗ್ಗೆ 11ಕ್ಕೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ 36 ಫಲಾನುಭವಿಗಳು ಹಾಗೂ ಅಧಿಕಾರಿಗಳು ಭಾಗವಹಿಸಲಿದ್ದಾರೆ.