ನವದೆಹಲಿ: ಸಂಸತ್‌ನಲ್ಲಿ ಪ್ರಶ್ನೆಗಳನ್ನು ಕೇಳಲು ಲಂಚ ಪಡೆದಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ತೃಣಮೂಲ ಕಾಂಗ್ರೆಸ್ ಪಕ್ಷದ (ಟಿಎಂಸಿ) ಸಂಸದೆ ಮಹುವಾ ಮೋಯಿತ್ರಾ ಅವರನ್ನು ಲೋಕಸಭೆಯಿಂದ ಇಂದು (ಶುಕ್ರವಾರ) ಉಚ್ಛಾಟಿಸಲಾಗಿದೆ.
ನವದೆಹಲಿ: ಸಂಸತ್‌ನಲ್ಲಿ ಪ್ರಶ್ನೆಗಳನ್ನು ಕೇಳಲು ಲಂಚ ಪಡೆದಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ತೃಣಮೂಲ ಕಾಂಗ್ರೆಸ್ ಪಕ್ಷದ (ಟಿಎಂಸಿ) ಸಂಸದೆ ಮಹುವಾ ಮೋಯಿತ್ರಾ ಅವರನ್ನು ಲೋಕಸಭೆಯಿಂದ ಇಂದು (ಶುಕ್ರವಾರ) ಉಚ್ಛಾಟಿಸಲಾಗಿದೆ.
ಮಹುವಾ ಅವರನ್ನು ಸದನದಿಂದ ಉಚ್ಚಾಟಿಸುವಂತೆ ಶಿಫಾರಸು ಮಾಡಿದ್ದ 495 ಪುಟಗಳ ವರದಿಯನ್ನು ಲೋಕಸಭೆ ನೀತಿ ಸಮಿತಿ ಮುಖ್ಯಸ್ಥ ವಿನೋದ್ ಕುಮಾರ್ ಸೋನಕರ್ ಅವರು, ಇಂದು ಮಧ್ಯಾಹ್ನ 12ಕ್ಕೆ ಮಂಡಿಸಿದರು.
ಈ ವೇಳೆ ಟಿಎಂಸಿ ಹಾಗೂ ಕಾಂಗ್ರೆಸ್ ಪಕ್ಷದ ಕೆಲವು ಸದಸ್ಯರು ಸದನದ ಬಾವಿಗೆ ಇಳಿದು, ವರದಿಯ ಪ್ರತಿಯನ್ನು ನೀಡುವಂತೆ ಒತ್ತಾಯಿಸಿ ಘೋಷಣೆ ಕೂಗಿದರು. ಹೀಗಾಗಿ ಸದನವನ್ನು ಮತ್ತೆ ಮಧ್ಯಾಹ್ನ 2ರ ವರೆಗೆ ಮುಂದೂಡಲಾಯಿತು.
ಸದನ ಪುನರಾರಂಭದ ಬಳಿಕ ವರದಿ ಮೇಲಿನ ಚರ್ಚೆ ಆರಂಭಿಸಲಾಯಿತಾದರೂ ಗದ್ದಲ ಉಂಟಾಯಿತು. ಈ ನಡುವೆ ಮೋಯಿತ್ರಾ ಅವರಿಗೆ ಮಾತನಾಡಲು ಅವಕಾಶ ಸಿಗಲಿಲ್ಲ. ಈ ವೇಳೆ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಅವರು ಮೋಯಿತ್ರಾ ಅವರ ಉಚ್ಚಾಟನೆ ಪ್ರಕ್ರಿಯೆಗೆ ಚಾಲನೆ ನೀಡಿದರು.
ಲೋಕಸಭೆ ಸ್ಪೀಕರ್ ಅವರು ಧ್ವನಿ ಮತದ ಮೂಲಕ ಸದಸ್ಯರ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗುತ್ತಿದ್ದಂತೆ, ವಿರೋಧ ಪಕ್ಷಗಳ ಸದಸ್ಯರು ಸದನದಿಂದ ಹೊರ ನಡೆದರು.