ಕಾಸರಗೋಡು: ಜಲಶಕ್ತಿ ಅಭಿಯಾನ 'ಕ್ಯಾಚ್ ದಿ ರೈನ್'ಪರಿಶೀಲನಾ ಸಭೆ ಕಾಸರಗೋಡು ಜಿಲ್ಲಾಧಿಕಾರಿಗಳ ಚೇಂಬರ್‍ನಲ್ಲಿ ಜರುಗಿತು. ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಅಧ್ಯಕ್ಷತೆ ವಹಿಸಿದ್ದರು. ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಸಭೆಯಲ್ಲಿ ಮಂಡಿಸಲಾಯಿತು.
ರೈತರ ಸಮಸ್ಯೆಗಳನ್ನು ನೇರವಾಗಿ ಅರಿತುಕೊಳ್ಳುವುದರ ಜತೆಗೆ ಮಾಹಿತಿ ಸಂಗ್ರಹಕ್ಕಾಗಿ ಕೃಷಿಕರನ್ನು ಖುದ್ದು ಭೇಟಿ ಮಾಡಲಾಗುವುದು. ಕಾಡಾನೆಗಳಿಂದ ಬೆಳೆ ನಾಶವಾಗದಂತೆ ಆಯಾ ಪಂಚಾಯಿತಿ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು. ಚಂದ್ರಗಿರಿ ನದಿಯಿಂದ ಲವಣಯುಕ್ತ ನೀರು ಸಿಹಿನೀರಿನೊಂದಿಗೆ ಸೇರಿಕೊಳ್ಳದಂತೆ ಚೆಕ್ ಡ್ಯಾಂ ನಿರ್ಮಿಸಬೇಕು. ಈಗಾಗಲೇ ಚೆಕ್ ಡ್ಯಾಂ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಕೈಗೆತ್ತಿಕೊಳ್ಳಲಾಗಿದೆ ಎಂದು ನೀರಾವರಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ಕೃಷಿ ಇಲಾಖೆಯು ಕೃಷಿ ಉಪಕರಣಗಳನ್ನು ನೀಡುತ್ತಿದ್ದರೂ ಅದರ ದುರಸ್ತಿಗೆ ಬೇಕಾದ ಬಿಡಿಭಾಗಗಳು ಸಕಾಲಕ್ಕೆ ದೊರೆಯುತ್ತಿಲ್ಲ ಎಂಬ ದೂರು ಕೂಡ ಸಭೆಯಲ್ಲಿ ವ್ಯಕ್ತವಾಯಿತು. ಇದಕ್ಕೆ ಪರಿಹಾರ ಕಂಡುಕೊಳ್ಳುವಂತೆ ಕೃಷಿ ಇಲಾಖೆಗೆ ಜಿಲ್ಲಾಧಿಕಾರಿ ಸೂಚಿಸಿದರು.
ಕೃಷಿ ಭೂಮಿಗೆ ಅಕ್ರಮವಾಗಿ ಮಣ್ಣು ತುಂಬಿಸುತ್ತಿರುವುದರಿಂದ ಕೃಷಿ ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ದೂರೂ ಕೇಳಿಬಂತು. ಸುರುಮ ತೋಡಿನಲ್ಲಿ ತುಂಬಿಕೊಂಡಿರುವ ಹೂಳು ತೆಗೆದು ಆಳಗೊಳಿಸಿದರೆ ಕೃಷಿಗೆ ಅನುಕೂಲವಾಗಲಿದೆ ಎಂದು ಮಂಜೇಶ್ವರದ ಕೃಷಿಕರು ಸೂಚಿಸಿದರು. ಪಾಡಿ ಚೆಕ್ ಡ್ಯಾಂ ವಿನ್ಯಾಸ ಸಿದ್ಧಪಡಿಸಿ ಮುಖ್ಯ ಎಂಜಿನಿಯರ್ ಅನುಮೋದನೆಗೆ ಕಳುಹಿಸಲಾಗಿದೆ ಎಂದು ಕಿರುನೀರಾವರಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
ಜಿಲ್ಲಾ ಅಂತರ್ಜಲ ಇಲಾಖೆ ಅಧಿಕಾರಿ ಒ.ರತೀಶ್, ಸಣ್ಣ ನೀರಾವರಿ ಕಾರ್ಯಪಾಲಕ ಎಂಜಿನಿಯರ್ ಪಿ.ಟಿ.ಸಂಜೀವ್, ಕಾರ್ಯಪಾಲಕ ಎಂಜಿನಿಯರ್ ಪಿ.ರಮೇಶನ್, ನವಕೇರಳ ಮಿಷನ್ ಜಿಲ್ಲಾ ಸಂಯೋಜಕ ಕೆ.ಬಾಲಕೃಷ್ಣನ್, ಡಿಎಫ್‍ಒ ಅಶ್ರಫ್, ಸಹಾಯಕ ಭೂವಿಜ್ಞಾನಿ ಕೆ.ಎ.ರೋಶಿಲಾ, ಕೆ.ವಿದ್ಯಾ, ಕೆ.ಪಿ.ರಾಬಿಯತ್, ಇಲಾಖೆ ಮುಖ್ಯ ಅಧಿಕಾರಿಗಳು, ಚೆಮ್ನಾಡು, ಚೆಂಗಳ, ಮಧೂರು ಹಾಗೂ ಮಂಜೇಶ್ವರ ಗ್ರಾಮ ಪಂಚಾಯಿತಿ ಭತ್ತ ಗದ್ದೆ ಸಮಿತಿ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.