ಬದಿಯಡ್ಕ: ಉಕ್ಕಿನಡ್ಕದಲ್ಲಿ ನಿರ್ಮಾಣಹಂತದಲ್ಲಿರುವ ಕಾಸರಗೋಡು ವೈದ್ಯಕೀಯ ಕಾಲೇಜು ಆಸ್ಪತ್ರೆ ಹತ್ತು ವರ್ಷ ಸಂದರೂ ಪೂರ್ತಿಗೊಳಿಸಲಾಗದ ಸರ್ಕಾರದ ಧೋರಣೆ ಖಂಡಿಸಿ ಐಕ್ಯರಂಗ ಬದಿಯಡ್ಕ ಮಂಡಲ ಸಮಿತಿ ವತಿಯಿಂದ ಗುರುವಾರ ಕಾಲೇಜು ವಠಾರದಲ್ಲಿ 'ನವಕೇರಳ ಭಿಕ್ಷೆ ಬೇಡುವ' ಮೂಲಕ ವಿಶಿಷ್ಟ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.
ಕಾಸರಗೋಡು ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಧರಣಿ ಉದ್ಘಾಟಿಸಿ ಮಾತನಾಡಿ, ಐಕ್ಯರಂಗ ಆಡಳಿತಾವಧಿಯಲ್ಲಿ ಅಂದಿನ ಮುಖ್ಯ ಮಂತ್ರಿ ಊಮನ್‍ಚಾಂಡಿ ಶಿಲಾನ್ಯಾಸ ನಡೆಸಿರುವ ಜಿಲ್ಲೆಯ ಮಹತ್ವದ ಯೋಜನೆಯೊಂದನ್ನು ಎಡರಂಗ ಸರ್ಕಾರ ಸಂಪೂರ್ಣ ಬುಡಮೇಲುಗೊಳಿಸಲು ಯತ್ನಿಸುತ್ತಿದೆ. ಜಿಲ್ಲೆಯ ಜನತೆ ಉನ್ನತ ಚಿಕಿತ್ಸೆಗಾಗಿ ನೆರೆಯ ಜಿಲ್ಲೆ ಅಥವಾ ರಾಜ್ಯಗಳನ್ನು ಆಶ್ರಯಿಸಬೇಕಾದ ಸನ್ನಿವೇಶ ದೂರೀಕರಿಸಲು ಐಕ್ಯರಂಗ ಸರ್ಕಾರ ಆರಂಭಿಸಿದ ಯೋಜನೆ ಇದಾಗಿದ್ದು, ಎಡರಂಗ ಸರ್ಕಾರ ಆಸ್ಪತ್ರೆ ಕಾಮಗಾರಿ ಪೂರ್ತಿಗೊಳಿಸುವಲ್ಲಿ ಮೀನಾಮೇಷ ಎಣಿಸುತ್ತಿರುವುದು ಖಂಡನೀಯ. ಆಡಳಿತ ವಿಭಾಗ ಕಟ್ಟಡ ನಿರ್ಮಾಣಕ್ಕಷ್ಟೆ ಆಸ್ಪತ್ರೆ ಕಾಮಗಾರಿ ಸೀಮಿತಗೊಂಡಿದೆ. ಜಿಲ್ಲೆಯ ಎಂಡೋಸಲ್ಫಾನ್ ದುಷ್ಪರಿಣಾಮಪೀಡಿತರು ಹಾಗೂ ಜನಸಾಮಾನ್ಯರ ಪಾಲಿಗೆ ವರದಾನವಾಗಬೇಕಾಗಿದ್ದ ಆಸ್ಪತ್ರೆ ಕಾಮಗಾರಿ ಶೀಘ್ರ ಪೂರ್ತಿಗೊಳಿಸಲು ಸರ್ಕಾರ ಮುಂದಾಗಬೇಕು. ಆರ್ಥಿಕ ಸಂಕಷ್ಟದಿಂದ ಜನಸಾಮಾನ್ಯರು ದುರಿತ ಅನುಭವಿಸುತ್ತಿದ್ದರೆ, ಸಿಎಂ ಹಾಗೂ ಸಚಿವರು ನವಕೇರಳ ಯಾತ್ರೆಯ ಮೂಲಕ ಮೋಜು ನಡೆಸುತ್ತಿದ್ದಾರೆ ಎಂದು ಟೀಕಿಸಿದರು. ಈ ಸಂದರ್ಭ ಭಿಕ್ಷೆ ಎತ್ತುವ ಮೂಲಕ ವಿಶಿಷ್ಟ ರೀತಿಯಲ್ಲಿ ಹಮ್ಮಿಕೊಳ್ಳಲಾದ ಪ್ರತಿಭಟನೆಯನ್ನು ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಭಿಕ್ಷಾಪಾತ್ರೆಗೆ ಹಣ ಹಾಕುವ ಮೂಲಕ ಉದ್ಘಾಟಿಸಿದರು.
ಹೋರಟ ಸಮಿತಿ ಅದ್ಯಕ್ಷ ಮಾಹಿನ್ ಕೇಲೋಟ್ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಎನ್.ಎ ನೆಲ್ಲಿಕುನ್ನು, ಎ.ಕೆ.ಎಂ ಅಶ್ರಫ್, ಮಾಜಿ ಸಚಿವ ಸಿ.ಟಿ ಅಹಮ್ಮದಾಲಿ, ಬದಿಯಡ್ಕ ಗ್ರಾಪಂ ಅಧ್ಯಕ್ಷೆ ಶಾಂತಾ ಬಾರಡ್ಕ, ಉಪಾಧ್ಯಕ್ಷ ಎಂ. ಅಬ್ಬಾಸ್, ಸದಸ್ಯ ಶ್ಯಾಮ ಪ್ರಸಾದ್ ಮಾನ್ಯ, ಎಣ್ಮಕಜೆ ಗ್ರಾಪಂ ಉಪಾಧ್ಯಕ್ಷೆ ಡಾ. ಜಹನಾಸ್ ಹಂಸಾರ್, ಸದಸ್ಯೆ ರಮ್ಲಾ ಬಿ, ಸ್ಥಾಯೀ ಸಮಿತಿ ಅಧ್ಯಕ್ಷ ಬಾಲಕೃಷ್ಣ ಗಾಂಭೀರ್, ಕೇರಳ ಹಿರಿಯ ನಾಗರಿಕ ವೇದಿಕೆ ಬದಿಯಡ್ಕ ಘಟಕ ಅಧ್ಯಕ್ಷ ಈಶ್ವರ ಭಟ್ ಪೆರ್ಮುಖ ಮೊದಲಾದವರು ಉಪಸ್ಥಿತರಿದ್ದರು. ಎಣ್ಮಕಜೆ ಗ್ರಾಪಂ ಅಧ್ಯಕ್ಷ ಜೆ.ಎಸ್ ಸೋಮಶೇಖರ್ ಸ್ವಾಗತಿಸಿದರು.
ಕಾಸರಗೋಡಿನ ಅವಗಣನೆ:
ಕಾಸರಗೋಡು ವೈದ್ಯಕೀಯ ಕಾಲೇಜು ಆಸ್ಪತ್ರೆಯ ನಿರ್ಮಾಣ ವಿಳಂಬ ಧೋರಣೆ, ಸರ್ಕಾರ ಜಿಲ್ಲೆಯನ್ನು ಅವಗಣಿಸುತ್ತಿರುವುದಕ್ಕೆ ನಿದರ್ಶನವಾಗಿದೆ ಎಂಬುದಾಗಿ ಶಾಸಕ ಎನ್.ಎ ನೆಲ್ಲಿಕುನ್ನು ತಿಳಿಸಿದ್ದಾರೆ. ಶಿಲಾನ್ಯಾಸ ನಡೆಸಿ ಹತ್ತು ವರ್ಷ ಕಳೆದರೂ ಆಸ್ಪತ್ರೆ ಕಟ್ಟಡ ಕಾಮಗಾರಿ ಪೂರ್ತಿಗೊಳಿಸಲಾಗದಿರುವುದು ಈ ನಾಡಿನ ಜನತೆಗೆ ಎಸಗಿದ ವಂಚನೆಯಾಗಿದೆ. ಈ ಸರ್ಕಾರ ಕಾಸರಗೋಡಿನ ಜನತೆಯನ್ನು ವಂಚಿಸುವುದನ್ನು ಬಿಟ್ಟು, ತಕ್ಷಣ ಬಾಕಿ ಹಣ ಬಿಡುಗಡೆಗೊಳಿಸಿ, ಕಾಮಗಾರಿ ಪೂರ್ತಿಗೊಳಿಸುವಂತೆ ಆಗ್ರಹಿಸಿದ್ದಾರೆ.