ಕಾಸರಗೋಡು: 2022 ರ ಜುಲೈ, ಅಗೋಸ್ತ್ ಹಾಗೂ ಸೆಪ್ಟಂಬರ್ ತಿಂಗಳುಗಳಲ್ಲಿ ಅವ್ಯಾಹತವಾಗಿ ಸುರಿದ ಮಳೆಯಿಂದಾಗಿ ಮಂಜೇಶ್ವರ ತಾಲೂಕಿನ ಎಲ್ಲಾ ಅಡಿಕೆ ತೋಟಗಳಿಗೆ ಕೊಳೆರೋಗವು ಬಾಧಿಸಿ ಕೃಷಿಕರು 40 ರಿಂದ 50 ಶೇ. ದಷ್ಟು ಬೆಳೆ ನಷ್ಟವನ್ನು ಎದುರಿಸಿದ್ದರು. ಆದರೆ ಹವಾಮಾಧಾರಿತ ಪ್ರಧಾನ ಮಂತ್ರಿ ಫಸಲ್ ಬೀಮಾ ವಿಮೆ ಮಾಡಿಸಿದ ಕಾರಣ ವಿಮಾ ಪರಿಹಾರವು ಸಿಗಬಹುದು ಎನ್ನುವ ಭರವಸೆ ಈ ಭಾಗದ ಕೃಷಿಕರಲ್ಲಿ ಇತ್ತು. ಆದರೆ 2022 ರಲ್ಲಿ ಈ ಭಾಗದಲ್ಲಿ ಅತಿವೃಷ್ಟಿ ಆಗಲಿಲ್ಲ ಹಾಗೂ ಹವಾಮಾನ ವೈಪರಿತ್ಯವು ಸಂಭವಿಸಿಲ್ಲ ಎಂದು ಮಂಜೇಶ್ವರ ಭಾಗದ ಹವಾಮಾನ ಹಾಗೂ ಕೃಷಿ ಇಲಾಖೆಯು ವರದಿ ನೀಡಿರುವುದರಿಂದ ಇಲ್ಲಿನ ಕೃಷಿಕರಿಗೆ ಯಾವುದೇ ಕೃಷಿ ವಿಮೆ ಲಭಿಸದು ಎಂದು ಅಗ್ರಿಕಲ್ಚರಲ್ ಇನ್ಷೂರೆನ್ಸ್ ಕಂಪೆನಿ ಆಫ್ ಇಂಡಿಯಾದ ಅಧಿಕಾರಿಗಳು ತಿಳಿಸಿದ್ದಾರೆ. ಇದಕ್ಕೆ ಕೇರಳದ ಅಧಿಕಾರಿಗಳು ಹಾಗೂ ಕೇರಳ ಸರ್ಕಾರದ ನಿರ್ಲಕ್ಷ್ಯವೇ ಕಾರಣವಾಗಿದೆ.
2022 ನೇ ಸಾಲಿನಲ್ಲಿ ಮಳೆ ಹಾಗೂ ಕೊಳೆರೋಗದಿಂದ ಭಾರೀ ನಷ್ಟಕ್ಕೊಳಗಾಗಿರುವ ಮಂಜೇಶ್ವರದ ಅಡಿಕೆ ಕೃಷಿಕರಿಗಾಗಿರುವ ಅನ್ಯಾಯವನ್ನು ಸರಿಪಡಿಬೇಕೆಂದು ಮಂಜೇಶ್ವರ ಬ್ಲಾಕ್ ಪಂಚಾಯತಿ ಸದಸ್ಯ ಹಾಗೂ ಮಂಜೇಶ್ವರ ಬಿಜೆಪಿ ಕಾರ್ಯದರ್ಶಿಗಳಾದ ರಾಧಾಕೃಷ್ಣ ಕೆ.ವಿ, ಹಾಗೂ ಗಣೇಶ್ ಭಟ್ ವಾರಣಾಸಿ ನೇತೃತ್ವದ ಫಸಲ್ ಬೀಮಾ ಯೋಜನೆಯ ವಿಮಾದಾರರ ನಿಯೋಗವು ಇಂದು ಕಾಸರಗೋಡಿಗೆ ಆಗಮಿಸಿದ್ದ ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ಸಚಿವರಾದ ಶೋಭಾ ಕರಂದ್ಲಾಜೆಯವರನ್ನು ಭೇಟಿ ಮಾಡಿ ಮನವಿಯನ್ನು ಸಲ್ಲಿಸಿತು.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಕೇಂದ್ರ ಸಚಿವರು ಈ ಸಮಸ್ಯೆಯು ಕೇರಳ ರಾಜ್ಯ ಸರಕಾರದ ತಪ್ಪಿನಿಂದಾದರೂ ಈ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಕಾಸರಗೋಡು ಬಿಜೆಪಿಯ ಜಿಲ್ಲಾಧ್ಯಕ್ಷರಾದ ರವೀಶ್ ತಂತ್ರಿ ಕುಂಟಾರು, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ರೈ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸುಧಾಮ ಗೋಸಾಡ ಮೊದಲಾದವರು ಉಪಸ್ಥಿತರಿದ್ದರು.